ಚಾಮರಾಜನಗರ: ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳು ಅನುಷ್ಠಾನಗೊಂಡು ಮೂರು ವರ್ಷಗಳನ್ನು ಪೂರೈಸುತ್ತಿರುವ ವಾರ್ಷಿಕೋತ್ಸವವನ್ನು ಪಿ.ಎಂ.ಶ್ರೀ ಆದರ್ಶ ವಿದ್ಯಾಲಯದಲ್ಲಿ ಸಸಿಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಯ್ಯನಪುರದಲ್ಲಿರುವ ಪಿ.ಎಂ.ಶ್ರೀ ಆದರ್ಶ ವಿದ್ಯಾಲಯದ ಆವರಣದಲ್ಲಿಂದು ಪಂಚ ಗ್ಯಾರಂಟಿ ಯೋಜನೆಗಳ 3ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ತಾಲೂಕು ಪಂಚಾಯಿತಿ, ಪಿ.ಎಂ.ಶ್ರೀ ಆದರ್ಶ ವಿದ್ಯಾಲಯ ಹಾಗೂ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಹಯೋಗದಲ್ಲಿ 25 ಸಸಿಗಳನ್ನು ನೆಟ್ಟು ನೀರೆರೆಯಲಾಯಿತು.
ಇದೇ ವೇಳೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಸೋಮೇಶ್ವರ ಅವರು ಮಾತನಾಡಿ ರಾಜ್ಯ ಸರ್ಕಾರವು ಬಡವರು, ದುರ್ಬಲರ ಪರವಾಗಿ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಅನುಷ್ಟಾನಗೊಂಡು 3 ವರ್ಷ ಪೂರೈಸಿವೆ. ಗ್ಯಾರಂಟಿ ಯೋಜನೆಗಳ ವಾರ್ಷಿಕೋತ್ಸವ ಸಂಭ್ರಮಾಚರಣೆ ನಿಟ್ಟಿನಲ್ಲಿ ಪಂಚಾಯಿತಿಮಟ್ಟದ ಗ್ರಾಮ ಅಥವಾ ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರೆರೆಯುವಂತೆ ರಾಜ್ಯಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ನಿರ್ದೇಶನದನ್ವಯ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪಂಚ ಗ್ಯಾರಂಟಿಯ ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗಳನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಉತ್ತಮ ಪರಿಸರ ಹೊಂದುವ ಕಾಳಜಿಯೊಂದಿಗೆ ಆಚರಿಸಲಾಗುವ ವನಮಹೋತ್ಸವದ ಆಶಯ ಈಡೇರಿಸುವುದು ಪಂಚ ಗ್ಯಾರಂಟಿ ಯೋಜನೆಗಳ ವಾರ್ಷಿಕೋತ್ಸವದ ಮುಖ್ಯ ಉದ್ದೇಶವಾಗಿದೆ. ಈಗ ನೆಡುತ್ತಿರುವ ಸಸಿಗಳು ಮುಂದಿನ ದಿನಗಳಲ್ಲಿ ಜನರಿಗೆ ಅನುಕೂಲವಾಗುವಂತೆ ಹೆಮ್ಮರವಾಗಿ ಬೆಳೆಯಬೇಕು. ಅದೇ ರೀತಿ ಪಂಚ ಗ್ಯಾರಂಟಿ ಯೋಜನೆಗಳು ಹೆಮ್ಮರದಂತೆ ಎಲ್ಲಾ ಜನರನ್ನು ತಲುಪಬೇಕಾಗಿದೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಸೋಮೇಶ್ವರ ಅವರು ತಿಳಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಿರಿಧರ್, ಯೋಜನಾಧಿಕಾರಿ ಕಿರಣ್‍ಕುಮಾರ್, ಪಿ.ಎಂ.ಶ್ರೀ ಅದರ್ಶ ವಿದ್ಯಾಲಯದ ಮುಖ್ಯಶಿಕ್ಷಕರಾದ ತ್ಯಾಗರಾಜಮೂರ್ತಿ, ಹರದನಹಳ್ಳಿ ವಿಭಾಗದ ಚೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ದ್ರುಪದ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಬ್ಬಯ್ಯ, ತಾಲೂಕು ಆಹಾರ ನಿರೀಕ್ಷಕರಾದ ಚಿಕ್ಕಣ್ಣ, ಶಿವಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಫೈಸಲ್ ಶರೀಫ್, ಕಾರ್ಯದರ್ಶಿ ಮಂಜುನಾಥ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಕುಮಾರಸ್ವಾಮಿ, ಮಂಜುಳ, ಮಲ್ಲಿಕಾರ್ಜುನ, ರಾಜೇಶ್, ಜಡೆಯಪ್ಪ, ಹರವೆ ರಂಗಸ್ವಾಮಿ, ಮರಿಯಾಲದಹುಂಡಿ ಕುಮಾರ್, ಇತರರು ಇದೇ ಸಂದರ್ಭದಲ್ಲಿ ಇದ್ದರು.
ಬಳಿಕ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಸೋಮೇಶ್ವರ ಹಾಗೂ ಸಮಿತಿ ಸದಸ್ಯರು ಮತ್ತು ಚೆಸ್ಕಾಂ ಅಧಿಕಾರಿಗಳೊಂದಿಗೆ ಮಲ್ಲಯ್ಯನಪುರ ಗ್ರಾಮದಲ್ಲಿ ಗೃಹಜ್ಯೋತಿ ಫಲಾನುಭವಿಗಳ ಮನೆಗೆ ತೆರಳಿ ದಾಖಲೆಗಳ ಪರಿಶೀಲನೆ ಕಾರ್ಯ ನಡೆಸಿದರು.