ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಎ.ಎಸ್.ಡಿ.ಡಿ.ಒ ಮತದಾರರ ಬಗ್ಗೆ ಪರಿಶೀಲಿಸಿ : ಜಿಲ್ಲಾಧಿಕಾರಿ ಶ್ರೀರೂಪ

ಚಾಮರಾಜನಗರ: ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಈಗಾಗಲೇ ಗುರುತಿಸಲಾಗಿರುವ ಒಟ್ಟು 84 ಸಾವಿರಕ್ಕೂ ಹೆಚ್ಚು ಗೈರು, ಸ್ಥಳಾಂತರ, ಮರಣ ಹೊಂದಿದವರು, ಎರಡು ಕಡೆ ನೊಂದಣಿ ಹಾಗೂ ಇತರೆ ಕಾರಣಗಳಿಂದ (ಎ.ಎಸ್.ಡಿ.ಡಿ.ಒ) ಮಾಹಿತಿ ಸಿಗದೆ ಇರುವ ಮತದಾರರ ಬಗ್ಗೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ (ಆ.1) ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026ರ ಸಂಬಂಧ ಗಣತಿ ನಮೂನೆ ವಿತರಣೆ ಹಾಗೂ ಗಣಕೀಕರಣ ಕೆಲಸ ಕಾರ್ಯಗಳ ಕುರಿತು ನೋಂದಾಯಿತ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಭಾರತ ಚುನಾವಣಾ ಆಯೋಗದ ನಿರ್ದೇಶದನ್ವಯ ಜಿಲ್ಲೆಯಲ್ಲಿ ಎಸ್.ಐ.ಆರ್ ಕರ್ಯ ಪ್ರಗತಿಯಲ್ಲಿದ್ದು, ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಒಟ್ಟು 8,80,224 ಮತದಾರರ ಪೈಕಿ, ಆಗಸ್ಟ್ 1ರ ಬೆಳಿಗ್ಗೆ 8 ಗಂಟೆಯವರೆಗೆ 7,96,096 ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಮತದಾರರಿಂದ ಸ್ವೀಕರಿಸಿ, ಗಣಕೀಕರಣಗೊಳಿಸಲಾಗಿದೆ. ಗೈರು, ಸ್ಥಳಾಂತರ, ಮರಣ ಹೊಂದಿದವರು, ಎರಡು ಕಡೆ ನೊಂದಣಿಯಾಗಿರುವವರು ಹಾಗೂ ಇತರೆ ಕಾರಣಗಳಿಂದ ಗುರುತಿಸಲಾಗಿರುವ ಒಟ್ಟು 84 ಸಾವಿರಕ್ಕೂ ಹೆಚ್ಚು ಮತದಾರರ ಕುರಿತು ಲಭ್ಯವಿರುವ ಮಾಹಿತಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಪರಿಶೀಲಿಸಿ ಮಾಹಿತಿ ಒದಗಿಸಿದರೆ ನಿಯಮಾನುಸಾರ ಮುಂದಿನ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. 

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ಆಗಸ್ಟ್ 8ರಂದು ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಸ್ವೀಕರಿಸಲು ಅಂತಿಮ ದಿನಾಂಕವಾಗಿದೆ. ಗಣತಿ ನಮೂನೆಗಳನ್ನು ಬಿ.ಎಲ್.ಒ.ಗಳಿಗೆ ನೀಡದೇ ಇರುವ ಮತದಾರರು ನಮೂನೆಗಳನ್ನು ಬಿ.ಎಲ್.ಒ.ಗಳಿಗೆ ನೀಡಿ ಸ್ವೀಕೃತಿ ಪಡೆದುಕೊಳ್ಳುವಂತೆ ಮತದಾರರಲ್ಲಿ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿಯವರು ಸಲಹೆ ಮಾಡಿದರು.  

ಆಗಸ್ಟ್ 17ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಸದರಿ ಕರಡು ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ನೋಂದಣಿಯಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ರಾಜಕೀಯ ಪಕ್ಷಗಳು ನೇಮಕ ಮಾಡಿರುವ ಬಿ.ಎಲ್.ಎ-2 ರವರ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಿ, ಮಹತ್ತರವಾದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಬೇಕೆಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಮನವಿ ಮಾಡಿದರು. 

ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಹೆಚ್.ಎಸ್ ತೋಂಟದಾರ್ಯಸ್ವಾಮಿ, ಎನ್. ನಾಗಯ್ಯ, ಎಸ್. ಬಾಲಸುಬ್ರಹ್ಮಣ್ಯ, ಎಂ. ಚಿಕ್ಕಮಹದೇವು, ಸೈಯದ್ ಅಕ್ರಮ್, ಚುನಾವಣಾ ಶಿರಸ್ತೇದಾರ್, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *