ಡಾ ಸಿ ಪಿ ಕೃಷ್ಣಕುಮಾರ್ ರವರಿಗೆ “ದೀಪ್ತಿ ಜೀವಮಾನ ಸಾಧನೆ” ಪ್ರಶಸ್ತಿ ಪ್ರದಾನ

  • ಸಿಪಿಕೆ ಗೆ ಜ್ಞಾನಪೀಠ ಪ್ರಶಸ್ತಿ ಬರಲಿ: ಲೇಖಕ ಕಾಳಿಹುಂಡಿ ಶಿವಕುಮಾರ್ ಅಭಿಪ್ರಾಯ.
ಮೈಸೂರು: ನಗರದ ಶ್ರೀರಾಂಪುರದಲ್ಲಿರುವ ಗೋವಿಂದರಾವ್ ಮೆಮೊರಿಯಲ್ ಪಿಯು ಕಾಲೇಜಿನಲ್ಲಿ "ದೀಪ್ತಿ ಸಾಂಸ್ಕೃತಿಕ ವೇದಿಕೆ" ವತಿಯಿಂದ ನಾಡಿನ ಹೆಸರಾಂತ ಸಾಹಿತಿ, ಪಂಪ ಪ್ರಶಸ್ತಿ ಪುರಸ್ಕೃತರು ಆದ ಡಾ ಸಿ ಪಿ ಕೃಷ್ಣಕುಮಾರ್ (ಸಿಪಿಕೆ) ರವರ ಸಮಗ್ರ ಸಾಹಿತ್ಯ ಸೇವೆಗಾಗಿ "ದೀಪ್ತಿ ಜೀವಮಾನ ಸಾಧನೆ" ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಈ ಕಾರ್ಯಕ್ರಮವನ್ನು ಲೇಖಕ ಕಾಳಿಹುಂಡಿ ಶಿವಕುಮಾರ್ ರವರು ಉದ್ಘಾಟಿಸಿದರು. ನಂತರ ಅವರು ಮಾತನಾಡುತ್ತಾ ಈ ಪ್ರಶಸ್ತಿಯನ್ನು ನೀಡಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯನ್ನುಂಟು ಮಾಡಿದೆ. "ಸಿಪಿಕೆ"- ಎಂಬ ಮೂರಕ್ಷರದ ವಿಸ್ಮಯ ಇವರು. ಈ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಸಮಗ್ರ ಸಾಹಿತ್ಯ ಸುಧೆ ಹರಿಸಿದ್ದಾರೆ, ಇವತ್ತಿಗೂ ಕೂಡ ಪತ್ರಿಕೆಗಳಲ್ಲಿ, ವಿಶೇಷ ಅಂಕಗಳಲ್ಲಿ ವಿಮರ್ಶೆ, ಚುಟುಕು, ಕವನ ಮೂಲಕ ತಮ್ಮ ಬರವಣಿಗೆಯನ್ನು ಮಾಡುತ್ತಾ ಬಂದವರು. ತಮ್ಮದೇ ಆದ ಶೈಲಿಯಲ್ಲಿ ಉತ್ಕೃಷ್ಟ ಸಾಹಿತ್ಯ ಬರೆದ ಸಿಪಿಕೆ ರವರಿಗೆ ಜ್ಞಾನಪೀಠ ಪ್ರಶಸ್ತಿ ಬರಲಿ ಎಂದು ನನ್ನ ಆಶಯ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ ಸಿ ಪಿ ಕೃಷ್ಣಕುಮಾರ್ ರವರು 9ನೇ ಶತಮಾನದ ಕವಿರಾಜಮಾರ್ಗವನ್ನು ನೆನಪಿಸಿಕೊಂಡು, ಆ ಕಾಲದಂತಲೂ ಕೂಡ ಕನ್ನಡಿಗರು ಅಭಿಮಾನಿಗಳಾಗಿದ್ದರು. ಅದನ್ನು ನಾವು ಓದಿದಾಗ ತಿಳಿಯುತ್ತದೆ. ವಿಶೇಷಣಗಳ ಅರ್ಥವೇ ಅಡಗಿರುತ್ತದೆ. ಇವತ್ತು ಆ ಗುಣಗಳು ಎಲ್ಲಿ ಹೋದವು ಎಂದು ಹುಡುಕುವಂತಾಗಿದೆ ಎಂದರು. ಇವತ್ತಿನ ತರುಣರು ಕನ್ನಡತನವನ್ನೇ ಮೆರೆಯಬೇಕು ಮರೆಯಬಾರದು ಎಂದರು. ಅದೇ ರೀತಿ ಗುರು- ಹಿರಿಯರನ್ನು ಗೌರವಿಸುವುದು ಕೂಡ ಸಂಸ್ಕೃತಿಯ ಒಂದು ಅಂಗ. ಈ ನಿಟ್ಟಿನಲ್ಲಿ ದೀಪ್ತಿ ಸಾಂಸ್ಕೃತಿಕ ವೇದಿಕೆ ನನ್ನನ್ನ ಈ ವಯಸ್ಸಿನಲ್ಲಿ ಗೌರವಿಸಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗೋವಿಂದ ರಾವ್ ಮೆಮೋರಿಯಲ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ರವಿ ಕೆ ರವರು ಮಾತನಾಡುತ್ತಾ ಶತಶತಮಾನಗಳಿಂದ ಕನ್ನಡದ ತೇರನ್ನ ಹಲವು ಕವಿಗಳು, ಲೇಖಕರು ಎಳೆದಿದ್ದಾರೆ. ಅದೇ ರೀತಿ ಸಿ ಪಿ ಕೆ ರವರು ತಮ್ಮ ಕವನ, ವಿಮರ್ಶಾ ಲೇಖನದ ಮೂಲಕ ಸಾಹಿತ್ಯದ ವಿವಿಧ ಮಜಲುಗಳ ದರ್ಶನ ಮಾಡಿದವರು. ಈ ಮೂಲಕ ಸಾಹಿತ್ಯ ಸೇವೆಯನ್ನು ನಿರಂತರವಾಗಿ ಮಾಡುತ್ತಾ ಬಂದವರು. ಅದರಲ್ಲೂ ಮುಖ್ಯವಾಗಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಪುಸ್ತಕಗಳಲ್ಲಿ ಕನ್ನಡ ಭಾಷೆಯನ್ನು ಓದುವಾಗ ಈ ಕವಿ ಪರಿಚಯ ಮಾಡಿಕೊಂಡಿದ್ದರು. ಆದರೆ ಈ ದಿನ ಅವರನ್ನ ನೋಡುವ ಸೌಭಾಗ್ಯ ಒದಗಿದೆ ಎಂದರು.

ಮೈಸೂರಿನ ಆರ್ ಎಂ ಪಿ ಯ ಹಿರಿಯ ಶುಶ್ರೂಷಕ ಕಣ್ಣೂರು ವಿ ಗೋವಿಂದಾಚಾರಿ ರವರು ಎಲ್ಲರನ್ನ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಲೇಖಕ ಮಿರ್ಲೆ ಚಂದ್ರಶೇಖರ್ ಸಿ ಪಿ ಕೆ ರವರ ಬಗ್ಗೆ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಡಾ ಕೆ ಲೀಲಾ ಪ್ರಕಾಶ್, ಕೆ ಎಂ ಲಿಂಗರಾಜು, ವಿನಾಯಕ್, ಡಿ ವಿ ಗಾಯಿತ್ರಿ, ಸಿ ಎಸ್ ಅಭಿನಂದನ್, ಸ್ವರಾಜ್, ಪುಟ್ಟಾಚಾರಿ, ರೇವಣ್ಣ ಮುಂತಾದವರು ಭಾಗಿಯಾಗಿದ್ದರು.

ಶಶಿಕಲಾ ಪ್ರಸಾದ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ದಲ್ಲಿ ಟಿ ಎನ್ ರಾಜೇಶ್ವರಿ ರವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಶ್ರೀಕಂಠಮೂರ್ತಿ ರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.

Leave a Reply

Your email address will not be published. Required fields are marked *