ಬಸವಮಾರ್ಗದಲ್ಲಿ ವ್ಯಸನಮುಕ್ತ ದಿನಾಚರಣೆ

  • ಲಿಂಗೈಕ್ಯ ಡಾ.ಶ್ರೀ ಮಹಾಂತ ಶಿವಯೋಗಿಗಳ ಜನ್ಮದಿನದ ಸ್ಮರಣಾರ್ಥ
  • ಡಿಎಚ್‌ಒ, ಡಿಡಿಡಬ್ಲೂ ಅಧಿಕಾರಿಗಳು ಭಾಗಿ

ಮೈಸೂರು : ಲಿಂಗೈಕ್ಯ ಡಾ.ಶ್ರೀ ಮಹಾಂತ ಶಿವಯೋಗಿಗಳ ಜನ್ಮದಿನದ ಸ್ಮರಣಾರ್ಥ ಬಸವಮಾರ್ಗ ಫೌಂಡೇಷನ್ ವತಿಯಿಂದ ನಗರದ ಸರಸ್ವತಿಪುರಂನಲ್ಲಿ ಇರುವ ಬಸವಮಾರ್ಗ ಮಾನಸಿಕ ಆರೋಗ್ಯ ಚಿಕಿತ್ಸ ಮತ್ತು ಪುನರ್ವಸತಿ ಕೇಂದ್ರದಲ್ಲಿ ಸೋಮವಾರ ಸಂಜೆ ವ್ಯಸನಮುಕ್ತ ದಿನಾಚರಣೆ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮೋಹನ್, ವ್ಯಸನಮುಕ್ತ ಎಂದರೆ ಮದ್ಯಪಾನ, ಧೂಮಪಾನ, ಮಾದಕ ದ್ರವ್ಯಗಳು (ಡ್ರಗ್ಸ್) ಅಥವಾ ಯಾವುದೇ ಕೆಟ್ಟ ಚಟಗಳಿಂದ ಮುಕ್ತವಾಗಿ ಆರೋಗ್ಯಕರ ಮತ್ತು ಸುಂದರ ಜೀವನವನ್ನು ನಡೆಸುವುದು ಎಂದರ್ಥ. ಡಾ.ಮಹಾಂತ ಶಿವಯೋಗಿ ಸ್ವಾಮೀಜಿ ಅವರು ಜೀವನದುದ್ದಕ್ಕೂ ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು. ವ್ಯಸನಿಗಳ ಮನಸ್ಸು ಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಶಿವಯೋಗಿಗಳು ಅಪ್ಪಟ ಬಸವತತ್ವ ಅನುಯಾಯಿ ಆಗಿದ್ದರು. ಜೀವನದುದ್ದಕ್ಕೂ ನಡೆ-ನುಡಿಯಲ್ಲಿ ಬಸವಾದಿ ಶರಣರ ವಿಚಾರಧಾರೆ ಮೈಗೂಡಿಸಿಕೊಂಡಿದ್ದರು. ಸಮಾಜದಲ್ಲಿ ಮಾದಕ ವ್ಯಸನಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಆಗಸ್ಟ್ 1 ರಂದು ಅವರ ಜನ್ಮದಿನದ ಸ್ಮರಣಾರ್ಥ ರಾಜ್ಯಾದ್ಯಂತ ‘ವ್ಯಸನಮುಕ್ತ ದಿನ’ ವನ್ನು ಆಚರಿಸುತ್ತದೆ. ದೇಶದ ಭವಿಷ್ಯ ಯುವಕರ ಕೈಯಲ್ಲಿದ್ದು, ಡಾ.ಮಹಾಂತ ಶಿವಯೋಗಿಗಳ ಆಶಯದಂತೆ ಯುವ ಜನತೆ ದುಶ್ಚಟಗಳಿಗೆ ಬಲಿಯಾಗದೆ ದೇಶ ಕಟ್ಟುವ ಕೆಲಸದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಎಸ್.ರಾಘವೇಂದ್ರ ಮಾತನಾಡಿ, ಡಾ.ಮಹಾಂತ ಶಿವಯೋಗಿ ಸ್ವಾಮೀಜಿ ಅವರು, ರಾಜ್ಯ, ದೇಶ, ವಿದೇಶಗಳಲ್ಲೂ ಕೂಡ ಸಂಚರಿಸಿ ಜೋಳಿಗೆ ಹಿಡಿದು ಜನರ ಬಳಿಯಲ್ಲಿ ದುಶ್ಚಟ, ದುರ್ಗುಣಗಳನ್ನು ಬೀಕ್ಷೆ ಬೇಡಿದರು. ಆ ಮೂಲಕ ಜನರಲ್ಲಿನ ವ್ಯಸನಗಳನ್ನು ಬೀಡಿಸುವ ಕೆಲಸ ಮಾಡಿದ್ದರು. ಅಂತಹ ಅಪರೂಪದ ಸೇವೆಯನ್ನು ಗುರುತಿಸಿ ಪರಮ ಪೂಜ್ಯ ಡಾ.ಮಹಾಂತ ಶಿವಯೋಗಿಗಳ ಜನ್ಮದಿನ ಆ.1ರಂದು ರಾಜ್ಯ ಸರ್ಕಾರ ವ್ಯಸನ ಮುಕ್ತ ದಿನಾಚರಣೆಯನ್ನಾಗಿ ರಾಜ್ಯದಾದ್ಯಂತ ಆಚರಿಸುತ್ತಿರುವುದು ಅಭಿಮಾನದ ಸಂಗತಿ. ಇಂದಿನ ಯುವ ಪೀಳಿಗೆ ಪರಮ ಪೂಜ್ಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಆದರ್ಶ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಯುವಜನತೆ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿದ್ದರೆ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ. ವ್ಯಸನಮುಕ್ತ ಸಮಾಜವನ್ನು ನಿರ್ಮಿಸಲು ಕೇವಲ ಸರ್ಕಾರಿ ಕಾರ್ಯಕ್ರಮಗಳು ಮಾತ್ರ ಸಾಲದು, ಪ್ರತಿಯೊಬ್ಬ ನಾಗರಿಕರು ಮತ್ತು ವಿದ್ಯಾರ್ಥಿಗಳು ಇದರಲ್ಲಿ ಸಕ್ರಿಯವಾಗಿ ಕೈಜೋಡಿಸಬೇಕು. ಆಗಿದ್ದರಷ್ಟೆ ವ್ಯಸನಮುಕ್ತ ಸಮಾಜವನ್ನು ನಿರ್ಮಾಣ ಮಾಡು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಚಂದನ ವಾಹಿನಿಯ ಗಾನ ಸಿಂಚನ ಗಾಯನ ರಿಯಾಲಿಟಿ ಶೋನಲ್ಲಿ ಪ್ರಥಮ ಬಹುಮಾನ ಪಡೆದು ವಿಜೇತರಾದ ವಿಶ್ವನಾಥ್ ಎಲ್.ಚಂಗಚಹಳ್ಳಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಬಸವಮಾರ್ಗ ಸಂಸ್ಥೆಯ ಸಂಸ್ಥಾಪಕ ಎಸ್.ಬಸವರಾಜು ಮಾತನಾಡಿ, ಇಳಕಲ್‌ನ ಪೂಜ್ಯ ಡಾ.ಮಹಾಂತ ಶಿವಯೋಗಿ ಸ್ವಾಮೀಜಿ ಅವರು ತಮ್ಮ ಜೀವನದುದ್ದಕ್ಕೂ ಮದ್ಯಪಾನ ಮತ್ತು ಇತರ ದುಶ್ಚಟಗಳ ವಿರುದ್ಧ ರಾಜ್ಯಾದ್ಯಂತ ಪಾದಯಾತ್ರೆಗಳನ್ನು ಮಾಡಿದರು. ಆ ಮೂಲಕ ಲಕ್ಷಾಂತರ ಜನರ ಮನಸ್ಸು ಪರಿವರ್ತಿಸಿ ವ್ಯಸನಮುಕ್ತಗೊಳಿಸಿದ್ದರು. ಮಾದಕ ವಸ್ತುಗಳು ಮತ್ತು ದುಶ್ಚಟಗಳಿಂದಾಗುವ ಹಾನಿಯ ಬಗ್ಗೆ ಶಾಲೆ, ಕಾಲೇಜು ಹಾಗೂ ಸಾರ್ವಜನಿಕ ವೇದಿಕೆಗಳಲ್ಲಿ ಜಾಗೃತಿ ಮೂಡಿಸಿ, ಆರೋಗ್ಯಕರ ಸಮಾಜವನ್ನು ನಿರ್ಮಿಸುವುದು ಈ ದಿನದ ಮುಖ್ಯ ಗುರಿಯಾಗಿದೆ. ಅದೆ ಹಾದಿಯಲ್ಲಿ ನಮ್ಮ ಬಸವ ಮಾರ್ಗ ಸಂಸ್ಥೆಯಿAದ ಉಚಿತ ಶಿಬಿರಗಳನ್ನು ಆಯೋಜಿಸುವ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಿಸಲು ಶ್ರಮಿಸಲಾಗುತ್ತಿದೆ ಎಂದರು.

ವ್ಯಸನಮುಕ್ತ ಕುರಿತು ಬಸವಮಾರ್ಗದಿಂದ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಪರಿಣಾಮ 6 ವರ್ಷಗಳಲ್ಲಿ 16 ಸಾವಿರಕ್ಕೂ ಹೆಚ್ಚು ವ್ಯಸನದಿಂದ ಬಳಲುತ್ತಿದ್ದವರಿಗೆ ಚಿಕಿತ್ಸೆ ನೀಡಲಾಗಿದೆ. ಅದರಲ್ಲಿ ಸಾವಿರಾರು ಜನರು ವ್ಯಸನದ ಕೂಪದಿಂದ ಹೊರ ಬಂದು ಇಂದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ನಮ್ಮ ಪೂಜ್ಯ ತಾತಾ ಅವರಾದ ದಿ.ಸೋನಿ ಎಂ. ಕರೀಗೌಡ ಅವರ 27ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ 59ನೇ ಉಚಿತ ಕುಡಿತ ಬಿಡಿಸುವ ಶಿಬಿರವನ್ನು ಇದೇ ಆ.9 ರಿಂದ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಈ ಬಗ್ಗೆ ಇತರರಿಗೆ ತಿಳಿಸಿ, ಅವರು ಕೂಡ ಎಲ್ಲರಂತೆ ವ್ಯಸನ ತ್ಯಜಿಸಿ ಬಾಳಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಲಿಂಗೈಕ್ಯ ಡಾ.ಶ್ರೀ ಮಹಾಂತ ಶಿವಯೋಗಿಗಳ ಜನ್ಮದಿನದ ಸ್ಮರಣಾರ್ಥ ಬಸವಮಾರ್ಗ ಫೌಂಡೇಷನ್ ವತಿಯಿಂದ ನಗರದ ಸರಸ್ವತಿಪುರಂನಲ್ಲಿ ಇರುವ ಬಸವಮಾರ್ಗ ಮಾನಸಿಕ ಆರೋಗ್ಯ ಚಿಕಿತ್ಸ ಮತ್ತು ಪುನರ್ವಸತಿ ಕೇಂದ್ರದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಮೋಹನ್, ಕೆ.ಎಸ್.ರಾಘವೇಂದ್ರ, ಎಸ್. ಬಸವರಾಜು, ವಿಶ್ವನಾಥ್ ಎಲ್.ಚಂಗಚಹಳ್ಳಿ ಇತರರು ಇದ್ದರು.

Leave a Reply

Your email address will not be published. Required fields are marked *