- ಉಮ್ಮತ್ತೂರಿನಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ ಅಂಗವಾಗಿ ಕೃಷಿ ವಸ್ತು ಪ್ರದರ್ಶನ

ಚಾಮರಾಜನಗರ: ತಾಲ್ಲೂಕಿನ ಉಮ್ಮತ್ತೂರಿನಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಕೃಷಿ ವಸ್ತು ಪ್ರದರ್ಶನ ಆಯೋಜಿಸಲಾಯಿತು.
ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠ ಶಾಲಾವರಣದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ವಿ. ಸಿ. ಫಾರಂ ಮಂಡ್ಯ, ಕೃಷಿ ಮಹಾವಿದ್ಯಾಲಯ, ಯಡಬೆಟ್ಟ,ಕೃಷಿ ವಿಜ್ಞಾನ ಕೇಂದ್ರ, ಹರದನಹಳ್ಳಿ ಫಾರ್ಮ್, ಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಾಯೋಜನೆ-ಹತ್ತಿ ಮತ್ತು ಜೋಳ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಸಂಬಂಧಿತ ಇಲಾಖೆಗಳು, ಹಾಲು ಉತ್ಪಾದಕರ ಸಹಕಾರ ಸಂಘ, ಉಮ್ಮತ್ತೂರು ಮತ್ತು ಕುದೇರು ಇವರುಗಳ ಸಂಯುಕ್ತ ಆಶ್ರಯದಲ್ಲಿ
ಅಂತಿಮ ವರ್ಷದ ಬಿ.ಎಸ್ಸಿ (ಆನರ್ಸ್) ಕೃಷಿ ವಿದ್ಯಾರ್ಥಿಗಳ ಐ.ಸಿ.ಎ.ಆರ್.ನ ಸ್ಪೂಡೆಂಟ್ ರೆಡಿ ಯೋಜನೆಯಡಿಯಲ್ಲಿಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ – 2026 ರ ಅಂಗವಾಗಿ ಅಯೋಜಿಸಿದ ಕೃಷಿ ಉತ್ಸವ ” ಅನ್ನದಾತನ ಕೃಷಿ ಬಿಂಬ. ಕೃಷಿ ವಸ್ತು ಪ್ರದರ್ಶನಕ್ಕೆ ಅಧಿಕಾರಿಗಳು, ರೈತರು ಮೆಚ್ಚುಗೆ ವ್ಯಕ್ತಪಡಿಸಿದರು. ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಗ್ರಾಮೀಣ ವಾಸಕ್ಕೆ ವಸತಿ ಸೌಲಭ್ಯ, ಆಹಾರ ಸೌಲಭ್ಯ ಮತ್ತು ಎಲ್ಲ ಕಾರ್ಯಕ್ರಮಗಳಿಗೂ ವಿದ್ಯಾರ್ಥಿಗಳ ಜೊತೆಗೆ ಬೆಂಬಲವಾಗಿ ನಿಂತು ಸಹಕರಿಸಿದ ಊರಿನ ಗ್ರಾಮಸ್ಥರಿಗೆ ವಂದಿಸಿ ನೆರೆದಿದ್ದ ಗಣ್ಯರಿಂದ ಅವರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ರೈತರಿಗೆ ಕೃಷಿಗೆ ಸಂಬಂಧಿಸಿದ ವಿವಿಧ ವಸ್ತುಗಳು, ಸುಧಾರಿತ ಕೃಷಿ ತಂತ್ರಜ್ಞಾನಗಳು ಹಾಗೂ ಆಧುನಿಕ ಕೃಷಿ ಪದ್ಧತಿಗಳ ಕುರಿತು ಮಾಹಿತಿ ನೀಡಿದರು.
ಪ್ರದರ್ಶನದಲ್ಲಿ ವಿವಿಧ ಬೆಳೆಗಳ ಬೀಜಗಳು, ಸಾವಯವ ಕೃಷಿ ಉತ್ಪನ್ನಗಳು, ಜೈವಿಕ ಗೊಬ್ಬರಗಳು, ಕೀಟನಾಶಕ ಹಾಗೂ ರೋಗ ನಿರ್ವಹಣಾ ವಿಧಾನಗಳು, ಮಣ್ಣಿನ ಆರೋಗ್ಯ ಸಂರಕ್ಷಣೆ, ನೀರಿನ ಸಮರ್ಪಕ ಬಳಕೆ ಮತ್ತು ಕೃಷಿ ಯಾಂತ್ರೀಕರಣಕ್ಕೆ ಸಂಬಂಧಿಸಿದ ವಸ್ತುಗಳನ್ನು ಪ್ರದರ್ಶಿಸಲಾಯಿತು. ರೈತರು ಪ್ರದರ್ಶನದಲ್ಲಿದ್ದ ವಸ್ತುಗಳನ್ನು ವೀಕ್ಷಿಸಿ ಅವುಗಳ ಬಳಕೆ ಹಾಗೂ ಪ್ರಯೋಜನಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.
ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದರಿಂದ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿ, ಬೆಳೆಗಳ ಉತ್ಪಾದಕತೆ ಹಾಗೂ ಗುಣಮಟ್ಟವನ್ನು ಹೆಚ್ಚಿಸಬಹುದು. ರೈತರು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅನುಸರಿಸುವ ಮೂಲಕ ಸುಸ್ಥಿರ ಹಾಗೂ ಲಾಭದಾಯಕ ಕೃಷಿಯನ್ನು ಕೈಗೊಳ್ಳುವಂತೆ ವಿದ್ಯಾರ್ಥಿಗಳು ತಿಳಿಸಿದರು.
ಕೃಷಿ ವಸ್ತು ಪ್ರದರ್ಶನವು ರೈತರಿಗೆ ಹೊಸ ಕೃಷಿ ತಂತ್ರಜ್ಞಾನಗಳ ಪರಿಚಯ ಮಾಡಿಸುವುದರ ಜೊತೆಗೆ ಕೃಷಿ ವಿದ್ಯಾರ್ಥಿಗಳು ಮತ್ತು ರೈತರ ನಡುವೆ ಜ್ಞಾನ ವಿನಿಮಯಕ್ಕೆ ಉತ್ತಮ ವೇದಿಕೆಯಾಯಿತು.
ಕೃಷಿ ವಸ್ತುಪ್ರದರ್ಶನ ಉದ್ಘಾಟಿಸಿದ ಮಂಡ್ಯದ ವಿ.ಸಿ.ಫಾರಂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಶಿಕ್ಷಣ ನಿರ್ದೇಶಕ ಡಾ.ಎನ್.ಶಿವಕುಮಾರ್ ಮಾತನಾಡಿ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ವಿ. ಸಿ. ಫಾರಂ ಮಂಡ್ಯ, ಕೃಷಿ ಮಹಾವಿದ್ಯಾಲಯ, ಯಡಬೆಟ್ಟ,ಕೃಷಿ ವಿಜ್ಞಾನ ಕೇಂದ್ರ, ವತಿಯಿಂದ ಅಂತಿಮ ವರ್ಷದ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಕೃಷಿಯಲ್ಲಿ ಏನೇನು ಅನುಭವ ಕಲಿತಿರುತ್ತಾರೆ. ಅದನ್ನು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಮೂಲಕ ಪ್ರಾಯೋಗಿಕ ರೈತರೊಂದಿಗೆ ಹಂಚಿಕೊಳ್ಳುವ ಕಾರ್ಯಕ್ರಮ ಇದಾಗಿದೆ. ವಿದ್ಯಾರ್ಥಿಗಳು ಗ್ರಾಮೀಣ ಜನರ ಜೀವನ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಲು, ಇದರಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ ಎಂದರು.
ವಿದ್ಯಾರ್ಥಿಗಳು ಕೃಷಿ ವಸ್ತು ಪ್ರದರ್ಶನ ವನ್ನು ತುಂಬಾ ಅಚ್ಚುಕಟ್ಟಾಗಿ ಮಾಡಿದ್ದಾರೆ. ಸಮಗ್ರ ಕೃಷಿ ಬೇಸಾಯದ ಅರಿವು ಮೂಡಿಸುವುದು, ಕೃಷಿಯಲ್ಲಿ ಲಾಭದಾಯಕವಾಗುವಂತಹ ಬೇಸಾಯ ಕ್ರಮ ಅನುಸರಿಸಿ ವಸ್ತುಪ್ರದರ್ಶನ ಅಯೋಜಿಸಿದ್ದಾರೆ. ರೈತರು ಕೃಷಿಯಲ್ಲಿ ಅಭಿವೃದ್ಧಿ ಹೊಂದಬೇಕು.
ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಚಾಮರಾಜನಗರ ಕೃಷಿ ಮಹಾವಿದ್ಯಾಲಯ ಡೀನ್ ಡಾ.ಸಿ.ದೊರೆಸ್ವಾಮಿ ಮಾತನಾಡಿ, ಪ್ರತಿ ವರ್ಷವೂ ಕಾಲೇಜು ವತಿಯಿಂದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ ಏರ್ಪಡಿಸಿ ನಾಲ್ಕು ಗೋಡೆ ಮಧ್ಯದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಗ್ರಾಮೀಣ ಪ್ರದೇಶದ ರೈತರ ಬದುಕು ತೋರಿಸುವುದು, ಕೃಷಿಯಲ್ಲಿ ಹೊಸತಂತ್ರಜ್ಞಾನ, ಹೊಸತಳಿ, ಆಧುನಿಕ ಕೃಷಿ ಪದ್ದತಿ ಗಳನ್ನು ರೈತರಿಗೆ ತೋರಿಸುವುದು, ಮುಂದೆ ವಿದ್ಯಾರ್ಥಿಯು ಕೃಷಿ ಅಧಿಕಾರಿಯಾಗಿ ನೇಮಕಗೊಂಡರೆ ಹಳ್ಳಿಯ ರೈತರ ಜೀವನ ಹೇಗಿರುತ್ತದೆ. ಅದರ ಚಿತ್ರ ಅರ್ಥವಾಗಬೇಕು ಎಂಬ ಉದ್ದೇಶದಿಂದ ಹಳ್ಳಿಯಲ್ಲಿ 100 ದಿನಗಳ ಕಾಲ ರೈತರೊಂದಿಗೆ ಕೆಲಸ ಮಾಡಿ ರೈತ, ವಿದ್ಯಾರ್ಥಿ ಮಾಹಿತಿ ವಿನಿಮಯ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಂಡ್ಯದ ವಿ.ಸಿ.ಫಾರಂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವಿಸ್ತರಣಾ ನಿರ್ದೇಶಕ ಡಾ.ಸಿ.ರಾಮಚಂದ್ರ, ಸಹಾಯಕ ಕೃಷಿ ನಿರ್ದೇಶಕಿ ವಿ.ರೂಪ, ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ.ಎನ್.ಟಿ.ನರೇಶ್, ಅಖಿಲ ಭಾರತ ಸುಸಂಘಟಿತ ಹತ್ತಿ ಬೆಳೆ ಸಂಶೋಧನಾ ಪ್ರಾಯೋಜನೆ ಮುಖ್ಯಸ್ಥ ಡಾ.ಶಶಿಕುಮಾರ್, ವಿಜ್ಞಾನಿ ಡಾ.ಚಂದ್ರಶೇಖರ್ ಎಸ್.ಕಳ್ಳಿಮನಿ, ಡಾ.ದೇವರಾಜು, ಡಾ.ಮೋಹನ್ ಕುಮಾರ್, ಡಾ.ಪವಿತ್ರ, ಡಾ.ಶರಣಪ್ಪ, ಡಾ.ವಾಘ್ ಮಾರೆ ವಿಜಯಕುಮಾರ್, ವೀರಪ್ಪಾ, ಕಲಾವಿದ ಉಮ್ಮತ್ತೂರು ಬಸವರಾಜು, ನಾಗೇಶ್, ಮಹೇಂದರ್, ಜಯಶೇಖರ್, ಸಿದ್ದಪ್ಪ, ಲೋಕೇಶ್, ಜಗದೀಶ್, ರವಿಶಂಕರ್ ಹಾಗೂ ಅಂತಿಮ ವರ್ಷದ ಬಿಎಸ್ಸಿ ಕೃಷಿ ವಿದ್ಯಾರ್ಥಿಗಳು, ರೈತರು ಭಾಗವಹಿಸಿದ್ದರು.