ಚಾಮರಾಜನಗರ: ಪ್ರಕೃತಿ ಮನುಷ್ಯನ ಎಲ್ಲ ಅವಶ್ಯಕತೆಗಳನ್ನು ಪೂರೈಸುತ್ತದೆ. ನೆಲ, ಜಲ, ಗಾಳಿ ಸ್ವಚ್ಛ ಶುದ್ಧವಾಗಿದ್ದಷ್ಟು ನಮ್ಮ ಅರೋಗ್ಯ ವೃದ್ಧಿಸುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ತಿಳಿಸಿದರು.
ನಗರದ ಸೋಮವಾರಪೇಟೆ ಬಡಾವಣೆಯಲ್ಲಿರುವ ಎಂ.ಸಿ.ಎಸ್. ಪ್ರೌಢಶಾಲೆಯಲ್ಲಿಂದು ಯುವ ವ್ಯವಹಾರಗಳ ಮತ್ತು ಕ್ರೀಡಾ ಸಜಿವಾಲಯ, ಮೈ ಭಾರತ್ ಕೇಂದ್ರ, ಎಂ.ಸಿ.ಎಸ್. ಶಿಕ್ಷಣ ಸಂಸ್ಥೆ ಹಾಗೂ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಸಂಯುಕ್ತಾಶ್ರಯದಲ್ಲಿ ಅಯೋಜಿಸಿದ್ದ ‘ವಿಶ್ವ ಪರಿಸರ ದಿನಾಚರಣೆ’ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಅರೋಗ್ಯವಾಗಿರಲು ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರಬೇಕು. ನಮ್ಮ ಮನೆಯನ್ನು ಮಾತ್ರ ನಾವು ಸ್ವಚ್ಛವಾಗಿ ಇಟ್ಟುಕೊಂಡರೆ ಸಾಕು, ಮನೆಯ ಹೊರಗಿನ ಪರಿಸರ ಸ್ವಚ್ಛತೆ ಕಾರ್ಯ ನಮ್ಮದಲ್ಲ ಎನ್ನುವ ಭಾವನೆ ನಮ್ಮಲ್ಲಿದೆ ಅದನ್ನು ಬಿಡಬೇಕು. ನಮ್ಮ ಸುತ್ತಲಿನ ಪರಿಸರ ನಮ್ಮದೆ ಎನ್ನುವ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದರು.
ಮನುಷ್ಯನ ದುರಾಸೆಯಿಂದ ಭೂಮಿಯಲ್ಲಿರುವ ಖನಿಜಗಳನ್ನು ಹೊರತೆಗೆದು ಪ್ರಕೃತಿಗೆ ಹಾನಿ ಮಾಡುತ್ತಿದ್ದೇವೆ. ಇದು ಕಡಿಮೆಯಾಗಬೇಕು, ಸ್ವಚ್ಚ ಪರಿಸರದಿಂದ ನಾವು ಆರೋಗ್ಯವಾಗಿ ಬದುಕಬೇಕು. ಮುಂದಿನ ಪೀಳಿಗೆಗೂ ಪರಿಸರವನ್ನು ಸ್ವಚ್ಛ ಮತ್ತು ಶುದ್ಧವಾಗಿಟ್ಟುಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುದೇರು ಚಾಮುಲ್ ನಿರ್ದೇಶಕರಾದ ಎಸ್. ಬಸವರಾಜು ಅವರು ದೇಶಾದ್ಯಂತ ಇಂದು ಪರಿಸರ ದಿನವನ್ನು ಅಚರಿಸಲಾಗುತ್ತಿದೆ. ಪ್ರತಿಯೊಬ್ಬರು ಆರೋಗ್ಯವಾಗಿ ಇರಲು ಶುದ್ಧ ಗಾಳಿ ತುಂಬಾ ಮುಖ್ಯ. ಅದು ನಮಗೆ ಸಿಗುವುದು ನಮ್ಮ ಸುತ್ತಮುತ್ತÀ ಹಸಿರು ಗಿಡ, ಮರಗಳು ಇದ್ದಾಗ ಮಾತ್ರ. ಅದನ್ನು ಉಳಿಸಿ ರಕ್ಷಿಸಿಕೊಳ್ಳಬೇಕು ಎಂದರು.
ಪ್ಲಾಸ್ಟಿಕ್ ಬ್ಯಾಗ್‍ಗಳು ಪರಿಸರಕ್ಕೆ ದೊಡ್ಡ ಮಾರಕ. ಇದು ಭೂಮಿ, ನೀರು ಸೇರಿದಂತೆ ಎಲ್ಲಿಯೂ ಕರಗುವುದಿಲ್ಲ. ಪರಿಸರ ಸ್ವಚ್ಚತೆಗಾಗಿ ಪ್ರತಿಯೊಬ್ಬರು ಗ್ರಾಮಪಂಚಾಯಿತಿ, ನಗರಸಭೆ ಜೊತೆಗೆ ಕೈಜೋಡಿಸಿ ಪ್ಲಾಸ್ಟಿಕ್ ಬ್ಯಾಗ್ ಬದಲು ಪರಿಸರ ಸ್ನೇಹಿ ಬ್ಯಾಗ್‍ಗಳನ್ನು ಬಳಸಬೇಕು. ಗ್ರಾಮ, ನಗರ ಸ್ವಚ್ಚವಾದರೆ ನಮ್ಮೆಲ್ಲರ ಆರೋಗ್ಯ ವೃದ್ಧಿಸುತ್ತದೆ ಎಂದು ಬಸವರಾಜು ಅವರು ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಏರ್ಪಡಿಸಲಾಗಿದ್ದ ಚಿತ್ರಕಲೆ, ರಸಪ್ರಶ್ನೆ, ಪ್ರಬಂಧ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷರಾದ ಜಿ. ಬಂಗಾರು ಅವರು ಬಹುಮಾನ ವಿತರಿಸಿ ಶುಭ ಹಾರೈಸಿದರು.
ಎಂಸಿಎಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಕೆ. ಶಶಿಧರ್‍ಮೂರ್ತಿ, ಆಡಳಿತ ಅಧಿಕಾರಿ ಎಂ. ನಾಗರಾಜು, ಮುಖ್ಯಶಿಕ್ಷಕರಾದ ಎಚ್.ಎಂ ಮಹಾದೇವಸ್ವಾಮಿ, ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರರಾದ ರಂಗರಾಜು, ವಕೀಲರಾದ ಎನ್. ಮಹೇಶ್, ಪರಿಸರ ಪ್ರೇಮಿ ಹಾಗೂ ಸಮಾಜ ಸೇವಕರಾದ ದಿಲೀಪ್ ಕುದರ್, ಚಿತ್ರಕಲಾ ಶಿಕ್ಷಕರಾದ ಸಿ.ಎಂ ಸಂಪತ್‍ಕುಮಾರ್, ಮೈ ಭಾರತ್ ಕೇಂದ್ರದ ಸಹನಾ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.