ಡಿಜಿಪಿ ಭೇಟಿ ಮಾಡಿದ ಕೆಯುಡಬ್ಲೂಜೆ ನಿಯೋಗ : ನಕಲಿ ಪತ್ರಕರ್ತರ ಮೇಲೆ ಕ್ರಮಕ್ಕೆ ಆಗ್ರಹ

  • ಆರ್‌ಟಿಐ ಪತ್ರಕರ್ತರ ಮೆಲೆ ನಿಗಾಕ್ಕೆ ಮನವಿ

ಬೆಂಗಳೂರು: ನೈಜ ಪತ್ರಕರ್ತರ ಮೇಲೆ ವಿನಾ ಕಾರಣ ತೇಜೋವಧೆ ಮಾಡುವ ನಕಲಿ ಮತ್ತು ಆರ್‌ಟಿಐ ಪತ್ರಕರ್ತರ ಮೇಲೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಪೊಲೀಸ್ ಮಹಾ ನಿರ್ದೇಶಕರನ್ನು ಒತ್ತಾಯಿಸಿದೆ.
ಬೆಂಗಳೂರಿನಲ್ಲಿ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ ಅವರನ್ನು ಭೇಟಿ ಮಾಡಿದ್ದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದ ಪದಾಧಿಕಾರಿಗಳ ನಿಯೋಗ ಈ ಬಗ್ಗೆ ಮನವಿ ಸಲ್ಲಿಸಿತು.
ಪತ್ರಿಕೆಗಳನ್ನೆ ತರದವರು, ಸುದ್ದಿಯನ್ನು ಬರೆಯಲು ಬಾರದವರು ಮತ್ತು ಸುದ್ದಿ ಮನೆಗೆ ಯಾವ ರೀತಿಯ ಸಂಬಂಧವೂ ಇಲ್ಲದವರು ತಾವೇ ಪತ್ರಕರ್ತರು ಎಂದು ಬಿಂಬಿಸಿಕೊಳ್ಳುವ ವಿಸಿಟಿಂಗ್ ಕಾರ್ಡ್ ಪತ್ರಕರ್ತರು, ನೆಪ ಮಾತ್ರಕ್ಕೆ ಸಂಘಟನೆ ಮಾಡಿಕೊಂಡು, ಬ್ಲಾಕ್ ಮೇಲ್ ಮಾಡುವ ಆರ್‌ಟಿಐ ಪತ್ರಕರ್ತರ ವಸೂಲಿ ದಂಧೆಯೂ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಈ ಬೆಳವಣಿಗೆಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ವಿನಂತಿಸಿದರು.
ಪತ್ರಿಕಾ ಸಂಘಟನೆಯ ಹೆಸರು ಹೇಳಿಕೊಳ್ಳುವ ಕೆಲ ನಕಲಿ ಪತ್ರಕರ್ತರು ಆಗಿಂದಾಗ್ಗೆ ಪೊಲೀಸ್ ಠಾಣೆಗೆ ದೂರು ಕೊಡುವುದು, ಆರ್‌ಟಿಐ ಹಾಕುವುದನ್ನೆ ತಮ್ಮ ಕಾಯಕವಾಗಿಸಿಕೊಂಡಿದ್ದಾರೆ. ಇಂಥವರನ್ನು ಪೊಲೀಸ್ ಠಾಣೆಯಲ್ಲೂ ಬ್ಲಾಕ್ ಲಿಸ್ಟ್‌ನಲ್ಲಿ ಸೇರಿಸಿ ಕ್ರಮ ಜರುಗಿಸಬೇಕು ಎಂದು ಪೊಲೀಸ್ ಮಾಹಾನಿರ್ದೇಶಕರಿಗೆ ಮನದಟ್ಟು ಮಾಡಿಕೊಡಲಾಯಿತು.
ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಜರುಗಿಸುವುದಾಗಿ ಪೊಲೀಸ್ ಮಾಹಾನಿರ್ದೇಶಕರು, ಕೆಯುಡಬ್ಲೂೃಜೆ ನಿಯೋಗಕ್ಕೆ ಭರವಸೆ ನೀಡಿದರು.
ನಿಯೋಗದಲ್ಲಿ ಕೆಯುಡಬ್ಲೂಜೆ ಉಪಾಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಕಾರ್ಯದರ್ಶಿಗಳಾದ ಸೋಮಶೇಖರ ಕೆರಗೋಡು, ನಿಂಗಪ್ಪ ಚಾವಡಿ, ಖಜಾಂಚಿ ವಾಸುದೇ ಹೊಳ್ಳ ಅವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *