
ಚಾಮರಾಜನಗರ: ಗಿರಿಜನ, ಆದಿವಾಸಿ ಕುಟುಂಬಗಳಿಗೆ ಸರ್ಕಾರ ಕೂಡಲೇ ಪೌಷ್ಟಿಕ ಆಹಾರ ಪೂರೈಸುವಂತೆ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಜಿಲ್ಲಾಧ್ಯಕ್ಷ ಎನ್.ಸುರೇಶ್ ಆದಿವಾಸಿ ಒತ್ತಾಯಿಸಿದರು.
ಹಲವು ತಿಂಗಳುಗಳಿಂದ ಗಿರಿಜನರಿಗೆ ಸಿಗಬೇಕಾದ ಪೌಷ್ಟಿಕ ಆಹಾರ ಕಿಟ್‌ಗಳು ವಿತರಣೆ ಆಗಿಲ್ಲ. ಆಗಾಗಿ ಅದನ್ನೇ ನಂಬಿರುವ ಗಿರಿಜನ, ಆದಿವಾಸಿ ಜನಾಂಗದವರಿಗೆ ತುಂಬಾ ತೊಂದರೆ ಉಂಟಾಗಿದೆ. ಜಿಲ್ಲೆಯಲ್ಲಿ ಬರ ಆವರಿಸಿದ್ದು, ಕೂಲಿ ಇಲ್ಲದೆ ಜನರು ತುಂಬಾ ಸಂಕಷ್ಟದಲ್ಲಿದ್ದಾರೆ.
ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಹಾಗೂ ಇಲಾಖೆಯ ಮೂಲಕ ವರ್ಷಪೂರ್ತಿ ಸಕಾಲಕ್ಕೆ ಪೌಷ್ಟಿಕ ಪದಾರ್ಥಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಹೊಸ ಮನೆ ನಿರ್ಮಿಸಿಕೊಡಿ: ಹಲವು ಆದಿವಾಸಿ, ಗಿರಿಜನ ಕಾಲೋನಿಗಳಲ್ಲಿ ನಿರ್ಮಿಸಲಾದ ವಸತಿಗಳು ಕಳಪೆ ಕಾಮಗಾರಿಯಿಂದಾಗಿ ಕುಸಿದು ಬೀಳುವ ಹಂತ ತಲುಪಿವೆ. ಮಳೆಗಾಲದಲ್ಲಿ ಸೋರುವುದು, ಗೋಡೆಗಳು ಬಿರುಕು ಬಿಡುವುದು ಮತ್ತು ಮೇಲ್ಚಾವಣಿ ಕುಸಿಯುವ ಭೀತಿಯಿಂದ ಗಿರಿಜನರು ಜೀವಭಯದಲ್ಲಿ ದಿನ ಕಳೆಯುವಂತಾಗಿದೆ. ಆಗಾಗಿ ಅವರಿಗೆ ಸೂಕ್ತ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಸುರೇಶ್ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
