- ಹನೂರು ಪತ್ರಕರ್ತರ ಭವನಕ್ಕೆ ಮತ್ತೆ 10 ಲಕ್ಷ ರೂ. ಅನುದಾನದ ಭರವಸೆ
ಹನೂರು: ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಕರ್ತರಿಗೆ ತಾಲೂಕು ಕೇಂದ್ರದಲ್ಲಿ ಸ್ವಂತ ಭವನ ಇರಬೇಕು ಎಂಬುದು ನನ್ನ ಬಹುದಿನದ ಕನಸು. ಈ ಭವನ ಕೇವಲ ಕಟ್ಟಡವಾಗಬಾರದು, ಇದು ನಮ್ಮ ತಾಲೂಕಿನ ಹೆಮ್ಮೆಯ ಕಟ್ಟಡವಾಗಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ಅಭಿಪ್ರಾಯಪಟ್ಟರು.
ತಾಲೂಕು ಕೇಂದ್ರದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಕಾರ್ಯನಿರತ ಪತ್ರಕರ್ತರ ಸಂಘದ ಭವನ ಕಾಮಗಾರಿಯನ್ನು ಶುಕ್ರವಾರ ಪರಿಶೀಲಿಸಿದ ನಂತರ ಅವರು ಮಾತನಾಡಿದರು.
“ಪತ್ರಕರ್ತರು ಸಮಾಜದ ಕಣ್ಣು ಮತ್ತು ಕಿವಿ. ನಿಮ್ಮ ನಿಸ್ವಾರ್ಥ ಸೇವೆಗೆ ನನ್ನ ಸಂಪೂರ್ಣ ಬೆಂಬಲವಿದೆ. ಮುಂದಿನ ಪತ್ರಿಕಾ ದಿನಾಚರಣೆಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಇದೇ ಭವನದಲ್ಲಿ ದಿನಾಚರಣೆ ಆಚರಿಸೋಣ. ಈಗಾಗಲೇ 10 ಲಕ್ಷ ರೂ. ನೀಡಿದ್ದೇನೆ, ಕೂಡಲೇ ಮತ್ತೆ 10 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿಸಿ, ಸಂಸದರಿಂದಲೂ ಅನುದಾನ ಕೊಡಿಸುತ್ತೇನೆ” ಎಂದು ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಜಿ. ದೇವರಾಜ ನಾಯ್ಡು ಮಾತನಾಡಿ, “ಶಾಸಕರ ಮಾರ್ಗದರ್ಶನದಿಂದಾಗಿ ಭವನದ ಕಾಮಗಾರಿ ಈ ಮಟ್ಟಕ್ಕೆ ಬಂದಿದೆ. ಈ ಹಿಂದೆ ಚಿಕ್ಕದಾಗಿ ಕಟ್ಟುವ ಯೋಜನೆ ಇತ್ತು, ನೀವು ಸಲಹೆ ನೀಡಿ ವಿಶಾಲವಾದ ಸಭಾಂಗಣ, ಡಿಜಿಟಲ್ ಗ್ರಂಥಾಲಯ ಮತ್ತು ಅತಿಥಿ ಕೊಠಡಿ ಇರುವಂತೆ ವಿನ್ಯಾಸ ಮಾಡಿಸಿದ್ದೀರಿ. ಇದು ಹನೂರು ತಾಲೂಕಿನ ಎಲ್ಲಾ ಪತ್ರಕರ್ತರಿಗೆ ಶಕ್ತಿ ಕೇಂದ್ರವಾಗಲಿದೆ” ಎಂದರು.
ನಿಕಟಪೂರ್ವ ಅಧ್ಯಕ್ಷ ಮಹಾದೇಶ್ ಮಾತನಾಡಿ, “ಹನೂರು ಪಟ್ಟಣದಲ್ಲಿ ಪತ್ರಕರ್ತರ ಭವನ ನಿರ್ಮಾಣಕ್ಕೆ ಪ್ರತಿಯೊಬ್ಬ ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ. ಆರಂಭದಲ್ಲಿ ಮಾಜಿ ಶಾಸಕ ಆರ್. ನರೇಂದ್ರ ಅವರು 10 ಸೆಂಟ್ ನಿವೇಶನ ಕೊಡಿಸಿ 5 ಲಕ್ಷ ರೂ. ಅನುದಾನ ನೀಡಿ ಅಡಿಪಾಯ ಹಾಕಿದರು. ನಂತರ ದಿ. ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರು 5 ಲಕ್ಷ ರೂ., ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ಅವರು 2.5 ಲಕ್ಷ ರೂ. ನೀಡಿದ್ದರು. ಈಗ ಹಾಲಿ ಶಾಸಕ ಎಂ.ಆರ್. ಮಂಜುನಾಥ್ ಮತ್ತು ಸಂಸದ ಸುನಿಲ್ ಬೋಸ್ ಅವರು ಹೆಚ್ಚಿನ ಅನುದಾನ ನೀಡಿ ಭವನಕ್ಕೆ ಬಲ ತುಂಬಿದ್ದಾರೆ. ನಿಮ್ಮ ಅಧ್ಯಕ್ಷತೆಯಲ್ಲಿಯೇ, ನಿಮ್ಮ ಕೈಯಿಂದಲೇ ಈ ಭವನ ಉದ್ಘಾಟನೆಯಾಗಬೇಕು ಎಂಬುದು ನಮ್ಮೆಲ್ಲರ ಆಸೆಯಾಗಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಖಜಾಂಚಿ ಸೋಮಶೇಖರ್, ಜಿಲ್ಲಾ ಸಂಘದ ಖಜಾಂಚಿ ಪುಟ್ಟರಾಜು ಜಿಲ್ಲಾ ನಿರ್ದೇಶಕರಾದ ನಂದೀಶ್, ವಿಜಯಕುಮಾರ್, ಮಂಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
