ಬಾವಿ, ಕೊಳವೆಬಾವಿ ಕೊರೆಯಲು ಅನುಮತಿ ಕಡ್ಡಾಯ : ಅಂತರ್ಜಲ ಬಳಕೆದಾರರು ನೊಂದಾಯಿಸಲು ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ

ಚಾಮರಾಜನಗರ: ಅಂತರ್ಜಲ ಸಂಪನ್ಮೂಲಗಳ ಮೌಲೀಕರಣ ಮಾರ್ಚ್-2024ರ ವರದಿಯನುಸಾರ ಜಿಲ್ಲೆಯ ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲ್ಲೂಕುಗಳು ಅಂತರ್ಜಲ ಅತಿಬಳಕೆ ತಾಲ್ಲೂಕುಗಳೆಂದು ಅಧಿಸೂಚಿತವಾಗಿದ್ದು, ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) ಅಧಿನಿಯಮ 2011 ಹಾಗೂ ನಿಯಮಾವಳಿ 2012ರಂತೆ ಹೊಸದಾಗಿ ಕೊಳವೆಬಾವಿ ಕೊರೆಯಲು ಜಿಲ್ಲಾ ಅಂತರ್ಜಲ ಸಮಿತಿಯಿಂದ ಅನುಮತಿ ಪಡೆದುಕೊಳ್ಳಬೇಕು. ಪ್ರತಿಯೊಬ್ಬ ಅಂತರ್ಜಲ ಬಳಕೆದಾರರು ಪ್ರಸ್ತುತ ಇರುವ ಬಾವಿ, ಕೊಳವೆಬಾವಿಗಳನ್ನು ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದ್ದಾರೆ.

ಕೃಷಿ, ತೋಟಗಾರಿಕೆ, ಕುಡಿಯುವ ನೀರಿನ ಹಾಗೂ ಇತರೆ ಉದ್ದೇಶಗಳಿಗೆ ಕೊಳವೆಬಾವಿ ಕೊರೆಸುವವರು ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರಗಳಾದ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ ಮತ್ತು ನಗರಸಭೆಗಳಿಂದ ಕಡ್ಡಾಯವಾಗಿ ಸಾರ್ವಜನಿಕ ಕುಡಿಯುವ ನೀರಿನ ಮೂಲಗಳ ಅಂತರತೆಯ ಬಗ್ಗೆ ದೃಢೀಕರಣ ಪತ್ರ ಪಡೆದು ನಂತರ ಆನ್‍ಲೈನ್ ಸೇವೆಗಳಡಿಯಲ್ಲಿ ಹೊಸ ಕೊಳವೆಬಾವಿ ಸ್ಥಳ ಆಯ್ಕೆಗಾಗಿ ಜಿಲ್ಲಾ ಅಂತರ್ಜಲ ಕಚೇರಿಗೆ ಅರ್ಜಿ ಸಲ್ಲಿಸಬೇಕು. 

ಅಧಿಸೂಚಿತ ಮತ್ತು ಅಧಿಸೂಚಿತವಲ್ಲದ ಪ್ರದೇಶಗಳಲ್ಲಿರುವ ಕೈಗಾರಿಕೆ, ವಾಣಿಜ್ಯ, ಮೂಲ ಸೌಕರ್ಯ ಅಭಿವೃದ್ಧಿ,  ಗಣಿಗಾರಿಕೆ, ಮನೋರಂಜನೆ ಘಟಕಗಳು ಯಾವುದೇ ಉದ್ದೇಶಗಳಿಗೆ ಅಂತರ್ಜಲವನ್ನು ಬಳಸಲು ಕರ್ನಾಟಕ ಅಂತರ್ಜಲ ಪ್ರಾಧಿಕಾರ, ಜಿಲ್ಲಾ ಅಂತರ್ಜಲ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ, ನಿರಾಕ್ಷೇಪಣಾ ಪತ್ರ (ಎನ್.ಒ.ಸಿ) ಪಡೆದುಕೊಳ್ಳಬೇಕು. ತಪ್ಪಿದ್ದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು.

ಜಿಲ್ಲೆಯಲ್ಲಿ ಕೊಳವೆಬಾವಿ ಕೊರೆಯುವ ರಿಗ್ ಯಂತ್ರಗಳ ಮಾಲೀಕರು, ಏಜೆನ್ಸಿಯವರು ಕಡ್ಡಾಯವಾಗಿ ಕರ್ನಾಟಕ ಅಂತರ್ಜಲ ಪ್ರಾಧಿಕಾರದಲ್ಲಿ ನೊಂದಣಿಯಾಗಿ ನಮೂನೆ 7ಎ ಪಡೆದು ಕೊಳವೆಬಾವಿ ಕೊರೆಯುವ ಕೆಲಸ ನಿರ್ವಹಿಸಬೇಕು. ಅನಧಿಕೃತವಾಗಿ ಕೊಳವೆಬಾವಿ ಕೊರೆಯುವ ರಿಗ್ ಯಂತ್ರಗಳಿಗೆ ನಿಯಮಾನುಸಾರ 25 ಸಾವಿರ ರೂ. ಗಳವರೆಗೆ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗುವುದು.

ಕರ್ನಾಟಕ ಅಂತರ್ಜಲ (ಅಧಿನಿಯಮ ಮತ್ತು ನಿರ್ವಹಣೆ ವಿನಿಯಮನ ಹಾಗೂ ನಿಯಂತ್ರಣ) ಅಧಿನಿಯಮ-2011 ಹಾಗೂ ನಿಯಮಾವಳಿ 2012ರ (ತಿದ್ದುಪಡಿ) ಅಧಿನಿಯಮ-2024ರಂತೆ ವಿಫಲ ಮತ್ತು ತೆರೆದ ಕೊಳವೆಬಾವಿಗಳಲ್ಲಿ ಚಿಕ್ಕ ಮಕ್ಕಳು ಬೀಳುವುದನ್ನು ತಡೆಗಟ್ಟುವ ಸಂಬಂಧ ಕೊರೆಯುವ ಏಜೆನ್ಸಿ, ಅನುμÁ್ಠನ ಏಜೆನ್ಸಿ ಮತ್ತು ಭೂ ಮಾಲೀಕರು ಕೊಳವೆಬಾವಿ ಕೊರೆಯುವ ಮೊದಲು ಕನಿಷ್ಠ 15 ದಿನಗಳ ಮುಂಚಿತವಾಗಿ ಸ್ಥಳೀಯ ಪ್ರಾಧಿಕಾರಕ್ಕೆ ಅಥವಾ ನಗರ ಸ್ಥಳೀಯ ಸಂಸ್ಥೆಗೆ ಲಿಖಿತವಾಗಿ ತಿಳಿಸಬೇಕು. 

ಕೊಳವೆಬಾವಿಯನ್ನು ಕೊರೆಯುವ, ದುರಸ್ತಿಗೊಳಿಸುವ ಪುನರುಜ್ಜೀವನಗೊಳಿಸುವ ಸಮಯದಲ್ಲಿ ವ್ಯಕ್ತಿ, ಮಕ್ಕಳ ಪ್ರವೇಶವನ್ನು ತಪ್ಪಿಸಲು ಸಂಪೂರ್ಣ ವಿಳಾಸವನ್ನು ತೋರುವ ಸೂಚನಾ ಫಲಕಗಳನ್ನು ಮತ್ತು ಕೊಳವೆಬಾವಿಯ ಸುತ್ತ ಮುಳ್ಳು, ತಂತಿ ಬೇಲಿ, ಯಾವುದೇ ಇತರೆ ಸೂಕ್ತ ತಡೆಗೋಡೆಯನ್ನು ನಿಲ್ಲಿಸಬೇಕು. ವಿಫಲಗೊಂಡ, ಬಿಟ್ಟುಬಿಡಲಾದ, ಅಪೂರ್ಣವಾದ ಕೊಳವೆಬಾವಿಗಳಲ್ಲಿ ಸಂಭವಿಸುವ ಮಾರಣಾಂತಿಕ ಆಕಸ್ಮಿಕಗಳನ್ನು ತಡೆಯಲು ಹಾಗೂ ಸದರಿ ಕೊಳವೆಬಾವಿಗಳು ಕುಸಿಯುವುದನ್ನು ತಡೆಗಟ್ಟಲು ಸುರಕ್ಷಿತವಾಗಿ ಮುಚ್ಚಬೇಕು ಮತ್ತು ಮುಚ್ಚಿರುವ ಮಾಹಿತಿಯನ್ನು ಸ್ಥಳೀಯ ಪ್ರಾಧಿಕಾರಕ್ಕೆ ಸಲ್ಲಿಸಬೇಕು.

ಗ್ರಾಮೀಣ ಮತ್ತು ನಗರ ಪ್ರದೇಶಗಳ ಸ್ಥಳೀಯ ಪ್ರಾಧಿಕಾರಗಳು, ಸ್ಥಳೀಯ ಪ್ರದೇಶಗಳಲ್ಲಿ ಕೊರೆಸಲಾದ ಕೊರೆಬಾವಿ, ಕೊಳವೆಬಾವಿಗಳ ಮೇಲೆ ನಿಗಾ ಇಡಬೇಕು. ವಿಫಲಗೊಂಡ, ಬಿಟ್ಟು ಹೋಗಿರುವ, ನಿಷ್ಕ್ರಿಯಗೊಂಡ ಕೊಳವೆಬಾವಿಗಳನ್ನು ಸರಿಯಾಗಿ ಮುಚ್ಚಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಸಂಭವಿಸಬಹುದಾದ ಅವಘಡಗಳು ತಡೆಯಲು ಸುರಕ್ಷಿತವಾಗಿ ಮುಚ್ಚಿಸಲು ಕ್ರಮ ವಹಿಸಬೇಕು. 

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಅಂತರ್ಜಲ ಬಳಕೆ ಪ್ರಮಾಣವು ಹೆಚ್ಚಾಗುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಅಂತರ್ಜಲದ ಕೊರತೆಯನ್ನು ತೀವ್ರವಾಗಿ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಸರ್ಕಾರಿ, ನಿಗಮ, ಮಂಡಳಿ, ಇತರೆ ಅರೆ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಕಟ್ಟಡಗಳಿಗೆ ಮಳೆನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಂಡು ಮಳೆ ನೀರು ಬಳಕೆ ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಉದ್ದೇಶಿತ ಜಮೀನುಗಳಲ್ಲಿ ಸೂಕ್ತವಾದ ಅಂತರ್ಜಲ ಮರು ಪೂರೈಕೆ ರಚನೆಗಳನ್ನು ನಿರ್ಮಿಸಿ ಹೆಚ್ಚಿನ ಮಳೆ ನೀರನ್ನು ಭೂಮಿಗೆ ಇಂಗಿಸಿ, ಅಂತರ್ಜಲವನ್ನು ಅಭಿವೃದ್ಧಿಪಡಿಸುವ ಕಾರ್ಯವನ್ನು ಕೈಗೊಳ್ಳಬೇಕು. 

ಕೃಷಿ ಚಟುವಟಿಕೆಗಳಲ್ಲಿ ಅಂತರ್ಜಲ ಬಳಕೆಯನ್ನು ನಿಯಂತ್ರಣಗೊಳಿಸಲು ತುಂತುರು ಮತ್ತು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಕೈಗಾರಿಕೆ, ವಾಣಿಜ್ಯ ಮತ್ತು ಮನೋರಂಜನೆ ಘಟಕಗಳು ಮಳೆ ನೀರು ಸಂಗ್ರಹಿಸಿ ಬಳಸಬೇಕು. ಅಂತರ್ಜಲ ಮರು ಪೂರೈಕೆ ರಚನೆಗಳನ್ನು ನಿರ್ಮಿಸಿಕೊಳ್ಳಬೇಕು. ತ್ಯಾಜ್ಯ ನೀರನ್ನು ಶುದ್ದೀಕರಿಸಿ ಮರು ಬಳಕೆ ಮಾಡಬೇಕು. ಅಂತರ್ಜಲ ಸಂಪನ್ಮೂಲ ಸಂರಕ್ಷಣೆ, ನಿಯಂತ್ರಣ ಹಾಗೂ ಅಭಿವೃದ್ಧಿ ಪಡಿಸುವುದಕ್ಕೆ ಹೆಚ್ಚು ಆದ್ಯತೆ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಹೆಚ್ಚಿನ ಮಾಹಿತಿಗಾಗಿ ನಗರದ ಬಿ ರಾಚಯ್ಯ ಜೋಡಿ ರಸ್ತೆ ಭ್ರಮರಾಂಭ ಬಡಾವಣೆಯಲ್ಲಿರುವ ಅಂತರ್ಜಲ ನಿರ್ದೇಶನಾಲಯದ ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂವಿಜ್ಞಾನಿಯವರನ್ನು (ದೂ.ಸಂ 08226-225288) ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *