ಶಿವಾನಂದ ತಗಡೂರು ವಿರುದ್ದ ಸುಳ್ಳು ದೂರು ಖಂಡಿಸಿ ಪ್ರತಿಭಟನೆ

  • ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ವಿರುದ್ದ ಡಿಯುಡಬ್ಲ್ಯೂಜೆ ಅಕ್ರೋಶ
  • ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರಿಗೆ ಮನವಿ

ಚಾಮರಾಜನಗರ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರ ವಿರುದ್ದ ಸುಳ್ಳು ದೂರು ದಾಖಲಿಸಿರುವುದನ್ನು ಖಂಡಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ
ಪ್ರತಿಭಟನೆ ನಡೆಸಲಾಯಿತು.

   ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ತಾಲ್ಲೂಕು ಅಧ್ಯಕ್ಷರು, ಪತ್ರಕರ್ತರು ಪ್ರತಿಭಟನೆ ನಡೆಸಿ, ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ
ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ  ಆರ್.ಎನ್.ಸಿದ್ದಲಿಂಗಸ್ವಾಮಿ ಅವರು ಮಾತನಾಡಿ, ಖ್ಯಾತ ಸಾಹಿತಿ ಡಿ.ವಿ. ಗುಂಡಪ್ಪ ಅವರು ಸ್ಥಾಪಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ತೊಂಬತ್ತೈದು ವಸಂತಗಳು ತುಂಬಿವೆ. ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಘಟಕಗಳನ್ನು ಹೊಂದಿರುವ, ಹತ್ತು ಸಾವಿರ ಸಕ್ರಿಯ ಪತ್ರಕರ್ತರ ಸದಸ್ಯರಿರುವ ದೇಶದ ಬೃಹತ್ ಸಂಘಟನೆಯಾಗಿದೆ ಎಂದರು.

ಚುನಾವಣಾ ಪ್ರಕ್ರಿಯೆ ಮೂಲಕ ಆಯ್ಕೆಯಾಗಿರುವ ನಮ್ಮ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರ ಬಗ್ಗೆ ಇತ್ತೀಚೆಗೆ ಹುಟ್ಟಿಕೊಂಡ ಬಂಗ್ಲೆ ಮಲ್ಲಿಕಾರ್ಜುನ ನೇತೃತ್ವದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಹೆಸರಿನಲ್ಲಿ ರಾಜ್ಯದ ವಿವಿಧೆಡೆ ಸುಳ್ಳು ದೂರುಗಳನ್ನು ನೀಡಲಾಗುತ್ತಿದೆ. ಇದು ಅತ್ಯಂತ ಖಂಡನೀಯ ಎಂದರು.

ಸುಳ್ಳು ದೂರುಗಳ ರೂವಾರಿ ಬಂಗ್ಲೆ ಮಲ್ಲಿಕಾರ್ಜುನ ಎಂಬಾತ ಸರ್ಕಾರಿ ಅಧಿಕಾರಿಗೆ ಬೆದರಿಕೆ ಹಾಕಿದ ಬಗ್ಗೆ ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ನಂ:581/333/2019 ಪ್ರಕರಣ ದಾಖಲಾಗಿದೆ. ಸಿರಗುಪ್ಪದಲ್ಲೂ ಪೊಲೀಸ್ ಪ್ರಕರಣ ದಾಖಲಾದ ಬಳಿಕ ಅವರು ಊರು ತೊರೆದಿರುತ್ತಾರೆ. ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಘಟನೆಯೊಂದರಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಿ ಬಚಾವ್ ಆಗಿರುವುದು ಹಸಿಹಸಿಯಾಗಿದೆ ಎಂದರು.

ಇಂತಹ ಹಿನ್ನೆಲೆಯ ಬಂಗ್ಲೆ ಮಲ್ಲಿಕಾರ್ಜುನ ಅವರು ಪತ್ರಕರ್ತರ ಸಂಘಟನೆ ಸೋಗಿನಲ್ಲಿ, ನಾವು ಸದಸ್ಯತ್ವ ಕೊಡಲು ನಿರಾಕರಿಸಿದವರ ಕೂಟ ಕಟ್ಟಿಕೊಂಡು ಕುತಂತ್ರ ಮಾಡುತ್ತಲೇ ಇದ್ದಾರೆ. ಆದ್ದರಿಂದ ಇವರು ನೀಡುವ ದೂರುಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುವ ಅಗತ್ಯವಿಲ್ಲ ಎಂದರು.

ರಂಗಭೂಮಿ ನೆಲೆಯಿಂದ ಬೆಳೆದು ಬಂದಿರುವ ಶಿವಾನಂದ ತಗಡೂರು ಅವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ ಬಂದಿರುವುದನ್ನು ಸಹಿಸಲಾಗದೆ ಅವರ ವಿರುದ್ಧ ಇಲ್ಲಸಲ್ಲದ ಆಪಾದನೆ ಮಾಡಿ ದೂರು ನೀಡುತ್ತಿದ್ದಾರೆ ಎಂದು ದೂರಿದರು.
ನಮ್ಮ ಸಂಘವು ಕಾರ್ಮಿಕ ಕಾಯ್ದೆಯಂತೆ ಸಂಘಟನಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದ್ದು, ಕಾಲ ಕಾಲಕ್ಕೆ ಲೆಕ್ಕಪತ್ರ, ವಹಿವಾಟುಗಳು ಪಾರದರ್ಶಕವಾಗಿವೆ. ಆಗಾಗ್ಗೆ ರಾಜ್ಯ ಸಮಿತಿ ಸಭೆ, ಪ್ರತಿ ವರ್ಷ ಸರ್ವ ಸದಸ್ಯರ ಸಾಮಾನ್ಯ ಸಭೆ ತಪ್ಪದ ನಡೆಯುತ್ತವೆ. ಶಿವಾನಂದ ತಗಡೂರು ಅವಧಿಯಲ್ಲಿ ಕ್ಷೇಮಾಭಿವೃದ್ಧಿ ನಿಧಿಗೆ 1.1 ಕೋಟಿ ಡೆಪಾಸಿಟ್ ಮಾಡಲಾಗಿದೆ. ಕೋವಿಡ್‌ಗೆ ಬಲಿಯಾದ ಪತ್ರಕರ್ತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಕೊಡಿಸಿರುವ ತಗಡೂರು ಅವರ ಕಾರ್ಯವನ್ನು ಯಾರೂ ಮರೆಯುವುದಿಲ್ಲ ಎಂದರು.

ಶಿವಾನಂದ ತಗಡೂರ್‌ರವರು ನಿತ್ಯವೂ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಕೆಯುಡಬ್ಲ್ಯೂಜೆ, ಸರ್ಕಾರದ ಅನೇಕ ಕಾರ್ಯಕ್ರಮಗಳಲ್ಲಿ ಸಹಯೋಗ ಹೊಂದಿದ್ದು, ಸರ್ಕಾರದ ಮಾನ್ಯತೆ ಹೊಂದಿರುವ ಪತ್ರಕರ್ತರ ಏಕೈಕ ಸಂಘಟನೆಯಾಗಿದೆ. ನೈಜ ಪತ್ರಕರ್ತರ ಸಂಘಟನೆಯಾಗಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾಯಿತ ಅಧ್ಯಕ್ಷರ ಮೇಲೆ ನೀಡಿರುವ ಸುಳ್ಳು ದೂರುಗಳನ್ನು ಮಾನ್ಯ ಮಾಡಬಾರದು. ದುರುದ್ದೇಶದಿಂದ ತೇಜೋವಧೆ ಮಾಡುತ್ತಿರುವ ಬಂಗ್ಲೆ ಮಲ್ಲಿಕಾರ್ಜನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಎಸ್.ಲಕ್ಕೂರು, ಉಪಾಧ್ಯಕ್ಷ ಡಿ.ಎನ್.ನಟರಾಜು, ಕಾರ್ಯದರ್ಶಿಗಳಾದ ಕೆ.ಎಸ್.ಫಾಲಲೋಚನ ಆರಾಧ್ಯ,ಯರಿಯೂರು ನಾಗೇಂದ್ರ, ಅಮಚವಾಡಿ ಆರ್.ರಾಜೇಂದ್ರ, ರಾಜ್ಯ ಸಮಿತಿ ಸದಸ್ಯ ಸಿ.ಮಹೇಂದ್ರ, ನಿರ್ದೇಶಕರಾದ ಪ್ರಕಾಶ್ ಬೆಲ್ಲದ್, ಶ್ರೀನಿವಾಸ ಬಿಳಿಗಿರಿ, ಮಲ್ಲಪ್ಪ, ಎಂ.ಬಸವರಾಜು, ಮಡಹಳ್ಳಿ ಮಹೇಶ್, ಹೊಮ್ಮ ನಂಜುಂಡನಾಯಕ, ಎಂ.ಮರಿಸ್ವಾಮಿ, ಬದನಗುಪ್ಪೆ ಮಲ್ಲಣ್ಣ, ವೈ.ಎಂ.ಭಾನುಪ್ರಕಾಶ್, ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷ ಚಿಕ್ಕಮಾಳಿಗೆ, ಯಳಂದೂರು ತಾಲ್ಲೂಕು ಅಧ್ಯಕ್ಷ ವಿ.ನಾಗರಾಜು, ಹನೂರು ತಾಲ್ಲೂಕು ಅಧ್ಯಕ್ಷ ದೇವರಾಜ ನಾಯ್ಡು, ಪ್ರಧಾನ ಕಾರ್ಯದರ್ಶಿಗಳಾದ ನಟರಾಜು, ಗಿರೀಶ್, ಪ್ರಭುಸ್ವಾಮಿ, ಸದಸ್ಯರು, ಪತ್ರಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *