ಅರಣ್ಯ ಸಂರಕ್ಷಣೆಗೆ ಸಾರ್ವಜನಿಕರ ಸಹಕಾರವೂ ಅಗತ್ಯ – ಸಿಸಿಎಫ್ ಮಾಲತಿ ಪ್ರಿಯಾ

​ಹನೂರು : ಭೌಗೋಳಿಕ ಪ್ರದೇಶಕ್ಕಿಂತ ಅರಣ್ಯ ಪ್ರದೇಶವೇ ಹೆಚ್ಚಿರುವ ಚಾಮರಾಜನಗರ ಜಿಲ್ಲೆಯಲ್ಲಿ ಶೇ. 51 ರಷ್ಟು ಭಾಗ ಅರಣ್ಯದಿಂದ ಆವೃತವಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಪಾತ್ರ ಅತ್ಯಂತ ಮುಖ್ಯವಾಗಿದೆ ಎಂದು ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್) ಮಾಲತಿ ಪ್ರಿಯಾ ತಿಳಿಸಿದರು.

​ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮದ ವ್ಯಾಪ್ತಿಗೆ ಒಳಪಡುವ ಗೋಪಿನಾಥಂನ ಯರಿಕೆಯಂನಲ್ಲಿ ಕುಖ್ಯಾತ ಕಾಡುಗಳ್ಳ ವೀರಪ್ಪನ್ ಗುಂಡಿಗೆ ಬಲಿಯಾದ ದಿವಂಗತ ಪದ್ಮಶ್ರೀ ಪಿ. ಶ್ರೀನಿವಾಸ್ ಅವರ ಸ್ಮಾರಕದ ಬಳಿ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

​ಅರಣ್ಯ ಇಲಾಖೆಯಲ್ಲಿ ವಾಚರ್‌ನಿಂದ ಹಿಡಿದು ಫಾರೆಸ್ಟ್ ಗಾರ್ಡ್, ಆರ್‌ಎಫ್‌ಒ, ಎಸಿಎಫ್, ಡಿಸಿಎಫ್, ಎಪಿಸಿಸಿಎಫ್‌ವರೆಗೆ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.

ನಮ್ಮ ಸಿಬ್ಬಂದಿಯ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದ ಫಲವಾಗಿಯೇ ಇಂದು ಕರ್ನಾಟಕವು ದೇಶದಲ್ಲೇ ಆನೆಗಳ ಸಂಖ್ಯೆಯಲ್ಲಿ ಪ್ರಥಮ, ಹುಲಿಗಳ ಸಂಖ್ಯೆಯಲ್ಲಿ ದ್ವಿತೀಯ ಹಾಗೂ ಚಿರತೆಗಳ ಸಂಖ್ಯೆಯಲ್ಲಿ ತೃತೀಯ ಸ್ಥಾನದಲ್ಲಿದೆ. ಇದು ಇಡೀ ರಾಜ್ಯಕ್ಕೆ ಹೆಮ್ಮೆಯ ವಿಷಯ ಎಂದು ಬಣ್ಣಿಸಿದರು.
​ಅರಣ್ಯ ರಕ್ಷಣೆ ಕೇವಲ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ. ಇಲಾಖೆಯ ಸಿಬ್ಬಂದಿಯೊಂದಿಗೆ ರೈತ ಬಾಂಧವರು ಹಾಗೂ ಸಾರ್ವಜನಿಕರು ಕೈಜೋಡಿಸಬೇಕು ಎಂದು ಅವರು ಇದೇ ವೇಳೆ ಮನವಿ ಮಾಡಿದರು.

​ಧೃತಿಗೆಡದೆ ಕರ್ತವ್ಯ ನಿರ್ವಹಿಸಿ: ಎಪಿಸಿಸಿಎಫ್ ಬಿಸ್ವಜಿತ್ ಮಿಶ್ರಾ
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಎಪಿಸಿಸಿಎಫ್) ಬಿಸ್ವಜಿತ್ ಮಿಶ್ರಾ ಅವರು, ಅರಣ್ಯ ರಕ್ಷಣೆಯಲ್ಲಿ ಜೀವತ್ಯಾಗ ಮಾಡಿದ ಹುತಾತ್ಮರ ಬಲಿದಾನವನ್ನು ಸ್ಮರಿಸಿಕೊಳ್ಳಬೇಕು. ಅವರು ನೀಡಿದ ಸಂದೇಶವನ್ನು ಅಳವಡಿಸಿಕೊಂಡು ಪ್ರತಿಯೊಬ್ಬ ಸಿಬ್ಬಂದಿಯೂ ಧೃತಿಗೆಡದೆ ಧೈರ್ಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದರು. ದಿವಂಗತ ಶ್ರೀನಿವಾಸ್ ಅವರು ತಮ್ಮ ನಿಸ್ವಾರ್ಥ ಸೇವೆಯ ಮೂಲಕ ಸಾರ್ವಜನಿಕರಿಗೆ ಹೇಗೆ ಹತ್ತಿರವಾಗಿದ್ದರು ಎಂಬುದನ್ನು ಉದಾಹರಿಸಿ ಅವರ ತ್ಯಾಗವನ್ನು ಸ್ಮರಿಸಿದರು.

​ಪ್ರಮುಖರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ನಿವೃತ್ತ ಅರಣ್ಯ ಉಪ ಸಂರಕ್ಷಣಾಧಿಕಾರಿ ವಾಸುದೇವ್, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಪ್ರಭಾರ ಎಸಿಎಫ್ ವಿರಾಜ್ ಹೊಸೂರು, ಮ.ಬೆಟ್ಟ ಪೊಲೀಸ್ ಠಾಣೆಯ ಜಯರಾಂ, ವಲಯ ಅರಣ್ಯಾಧಿಕಾರಿಗಳಾದ ಗುರುಮೂರ್ತಿ, ರಾಜಶೇಖರ್ ಮೂರ್ತಿ, ಜಿತೇಂದ್ರ, ರಮೇಶ್, ಗೋಪಿನಾಥಂ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮುತ್ತು, ಅರಣ್ಯ ಪರಿಸರ ಸಮಿತಿ ಅಧ್ಯಕ್ಷ ದೊರೆಸ್ವಾಮಿ, ಜಂಗಲ್ ಲೋಡ್ಜಸ್ ಅಂಡ್ ರೆಸಾರ್ಟ್‌ನ ಸ್ವಾಮಿ ಹಾಗೂ ಇಲಾಖೆಯ ವಿವಿಧ ವೃತ್ತಗಳಿಂದ ಆಗಮಿಸಿದ್ದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *