ಚಾಮರಾಜನಗರದಲ್ಲಿ ದಸರಾ ಆಚರಿಸುವಂತೆ ಸಿಎಂಗೆ ಮನವಿ

ಚಾಮರಾಜನಗರ: ಜಿಲ್ಲೆಯಲ್ಲಿ ಈ ಸಾರಿಯ ದಸರಾ ಮಹೋತ್ಸವವನ್ನು ನಡೆಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ  ನಗರದ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರ ಮುಖಾಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದ ಗಡಿಪ್ರದೇಶವಾದ ಚಾಮರಾಜನಗರವು ಐತಿಹಾಸಿಕ ಮತ್ತು ಜಾನಪದ ಹಿನ್ನಲೆಯನ್ನು ಹೊಂದಿದೆ ಮತ್ತು ಈ ಹಿಂದೆ ಇದು ಮೈಸೂರು ಜಿಲ್ಲೆಯ ಅವಿಭಾಜ್ಯ ಅಂಗವಾಗಿತ್ತು ಮತ್ತು ೯ನೇ ಖಾಸಾ ಚಾಮರಾಜ ಒಡೆಯರ್‌ರವರು ಇಲ್ಲಿ ೧೭೭೪ರಲ್ಲಿ ಜನಿಸಿದ ಅಂಗವಾಗಿ ಈ ಊರಿಗೆ ಚಾಮರಾಜನಗರ ಎಂದು ನಾಮಕರಣ ಮಾಡಲಾಯಿತು. ಮೈಸೂರು ಸಂಸ್ಥಾನಕ್ಕೂ, ಚಾಮರಾಜನಗರ ಅವಿನಾಭವ ಸಂಬಂಧವಿದೆ. ಕಳೆದ ೨೦೧೩ರಲ್ಲಿ ಅಂದಿನ ಮುಖ್ಯಮಂತ್ರಿ  ಸಿದ್ದರಾಮಯ್ಯರವರು ಮತ್ತು ಅಂದಿನ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ವಿ. ಶ್ರೀನಿವಾಸಪ್ರಸಾದ ರವರು ಹಾಗೂ ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವರಾದ  ಹೆಚ್.ಎಸ್. ಮಹದೇವಪ್ರಸಾದ್‌ರವರು ತೀರ್ಮಾನಿಸಿ ಚಾಮರಾಜನಗರದಲ್ಲೂ ದಸರಾ ಕಾರ್ಯಕ್ರಮ ಪ್ರಾರಂಭ ಮಾಡಿದರು. ಇದು ಬಹಳಷ್ಟು ವರ್ಷಗಳಿಂದ ಚಾಮರಾಜನಗರ ದಸರಾ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದು ಕಳೆದ ವರ್ಷದಿಂದ ಚಾಮರಾಜನಗರದಲ್ಲಿ  ದಸರಾ ನಿಂತು ಹೋಗಿದೆ ಮತ್ತು ಈ ಸಾರಿಯು  ಸರ್ಕಾರದಿಂದ ಚಾಮರಾಜನಗರ ದಸರಾ ಮಾಡುವ ಲಕ್ಷಣಗಳು ಕಾಣುತ್ತಿಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ ಸಾವಿರಾರು ಜನ ಜನಪದ, ಕಲೆ, ಸಾಂಸ್ಕೃತಿಕ, ಶೋಭಾನೆ, ಗೊರವರ ಕುಣಿತ, ಭಜನೆ, ತಂಬೂರಿ ಸೇರಿದಂತೆ ಇನ್ನೂ ಕಲೆಗಳನ್ನು ಬಲ್ಲಕಲಾವಿದರು ಇರುತ್ತಾರೆ. ಆದರೆ ರಾಜ್ಯ ಸರ್ಕಾರ ಏಕಾಏಕಿ ಯಾವುದೇ ಕಾರಣಗಳಿಲ್ಲದೆ ಚಾಮರಾಜನಗರ ದಸರಾ ನಿಲ್ಲಿಸಿರುವುದು ನೋವಿನ ಸಂಗತಿಯಾಗಿದೆ. ಒಂದು ಹೊಸ ಪರಂಪರೆಯನ್ನು ಸೃಷ್ಟಿಸಿರುವ ಸರ್ಕಾರ ಈಗ ಅದೇ ಪರಂಪರೆಯನ್ನು ನಿಲ್ಲಿಸಿರುವುದು ವಿಷಾಧನಿಯ.
ಆದ್ದರಿಂದ ತಾವು ಈ ಸಾರಿಯ ಚಾಮರಾಜನಗರದಲ್ಲಿ ದಸರಾ ಕಾರ್ಯಕ್ರಮವನ್ನು ನಡೆಸಬೇಕೆಂದು ಜಿಲ್ಲೆಯ ಜನತೆಯ  ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷ ಶ್ರೀನಿವಾಸಗೌಡ ಆಗ್ರಹಿಸಿದ್ದಾರೆ.
    ಈ ಸಂದರ್ಭದಲ್ಲಿ ಪಣ್ಯದಹುಂಡಿ ರಾಜು, ಮುತ್ತಿಗೆ ಗೋವಿಂದರಾಜು,
ರವಿಚಂದ್ರಪ್ರಸಾದ್ ಕಹಳೆ, ತತ್ವಪದ ರಾಚಪ್ಪ, ಸಿದ್ದರಾಜು, ರಾಚಪ್ಪ, ವೀರಗಾಸೆ ಡಾ. ಶಿವರುದ್ರಸ್ವಾಮಿ, ಜಯರಾಜು, ಮಂಗಲದ ಹೊಸೂರು ಶಿವಣ್ಣ,ರಂಗಸ್ವಾಮಿ, ಸುರೇಶ್,
ಇತರರು ಹಾಜರಿದ್ದರು.

Leave a Reply

Your email address will not be published. Required fields are marked *