ವಿಶ್ವಕರ್ಮರ ಮೂಲ ಕಲಾವೃತ್ತಿಯೇ ಶ್ರೇಷ್ಠವಾದದ್ದು : ಶಾಸಕರಾದ ಎಚ್.ಎಂ. ಗಣೇಶ್ ಪ್ರಸಾದ್

ಚಾಮರಾಜನಗರ: ತಂತ್ರಜ್ಞಾನ ಎಷ್ಟೇ ಮುಂದಿದ್ದರೂ, ಇಡೀ ಜಗತ್ತು ಕಂಪ್ಯೂಟರೀಕರಣಗೊಳ್ಳುತ್ತಿದ್ದರೂ ವಿಶ್ವಕರ್ಮರ ಮೂಲ ಕೈಕುಸುರಿ ಕಲಾವೃತ್ತಿಯೇ ಇಂದಿಗೂ ಶ್ರೇಷ್ಠವಾಗಿದೆ ಎಂದು ಗುಂಡ್ಲುಪೇಟೆ ಶಾಸಕರಾದ ಎಚ್.ಎಂ. ಗಣೇಶ್ ಪ್ರಸಾದ್ ಅವರು ತಿಳಿಸಿದರು.

ನಗರದ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜಗತ್ತು ವೈಜ್ಞಾನಿಕವಾಗಿ ಸಾಕಷ್ಟು ಪ್ರಗತಿ ಸಾಧಿಸಿದ್ದರು ವಿಶ್ವಕರ್ಮರ ವೃತ್ತಿಗೆ ತನ್ನದೇ ಆದ ಮೌಲ್ಯಯುತ ಮಹತ್ವವಿದೆ. ವಿಶ್ವಕರ್ಮರು ಎಲ್ಲಾ ವರ್ಗ, ಸಮುದಾಯಗಳಿಗೂ ಅಗತ್ಯವಾಗಿದ್ದಾರೆ. ಪ್ರತಿಯೊಬ್ಬರು ನಿರ್ಮಾಣ ಮಾಡುವ ಮನೆ, ದೇವಾಲಯಗಳಿಗೆ ವಿಶ್ವಕರ್ಮರ ಕಲಾ ಕೈಸುರಿ ಕೆಲಸ ಬೇಕೆಬೇಕು. ವಿಶ್ವಕರ್ಮ ಸಮುದಾಯಕ್ಕೆ ನಿಗಮ ಸ್ಥಾಪನೆ ಮೂಲಕ ಸರ್ಕಾರವು ಅಗತ್ಯ ನೆರವು ಕಲ್ಪಿಸುತ್ತಿದೆ. ಶಿಕ್ಷಣ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಸಮುದಾಯ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಸಮುದಾಯಕ್ಕೆ ಸಮುದಾಯ ಭವನ ಅಗತ್ಯವಿದ್ದು, ಗುಂಡ್ಲುಪೇಟೆ ಪುರಸಭಾ ವ್ಯಾಪ್ತಿಯಲ್ಲಿ ಜಾಗ ಗುರುತಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಜಿಲ್ಲಾಕೇಂದ್ರದ ಸಮುದಾಯ ಭವನಕ್ಕಾಗಿ ಚಾಮರಾಜನಗರ ತಾಲೂಕಿನ ಮಾದಾಪುರದಲ್ಲಿ ಜಾಗ ನೀಡಲಾಗಿದೆ. ಭವನ ನಿರ್ಮಾಣಕ್ಕೂ ಸರ್ಕಾರದಿಂದ ಅಗತ್ಯ ಅನುದಾನ ನೀಡಲಾಗುವುದು. ಶಾಸಕರಾದ ಎಚ್.ಎಂ. ಗಣೇಶ್ ಪ್ರಸಾದ್ ಅವರು ತಿಳಿಸಿದರು.

ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಿ. ಮರಿಸ್ವಾಮಿ ಅವರು ಮಾತನಾಡಿ ಜಗತ್ತಿನ ಸೃಷ್ಠಿಕರ್ತ ವಿಶ್ವಕರ್ಮ ಆಗಿದ್ದಾರೆ. ಮನೆ, ದೇವಾಲಯಗಳ ನಿರ್ಮಾಣದ ಹಿಂದೆ ವಿಶ್ವಕರ್ಮ ಸಮುದಾಯದ ಶ್ರಮವಿದೆ. ವಿಶ್ವಕರ್ಮ ಎಂದರೇ ಎಲ್ಲರ, ಎಲ್ಲದರ ಸೃಷ್ಠಿಕರ್ತ ಎಂದು ಪುರಾಣಗಳಲ್ಲಿದೆ. ಚಿನ್ನದ ಕೆಲಸ, ಮರಗೆಲಸ, ಕಬ್ಬಿಣದ ಕೆಲಸ, ಶಿಲ್ಪಿಗಳು ಸೇರಿದಂತೆ 5 ಬಗೆಯ ವೃತ್ತಿ ಮಾಡುವವರು ವಿಶ್ವಕರ್ಮ ಸಮುದಾಯಕ್ಕೆ ಸೇರಿದವರಾಗಿದ್ದು, ನಾವೆಲ್ಲರೂ ವಾಸ ಮಾಡಲು, ನೆಮ್ಮದಿ ಜೀವನ ನಡೆಸಲು ವಿಶ್ವಕರ್ಮರ ಸಹಕಾರ ಬೇಕು ಎಂದರು.

ಮುಖ್ಯ ಭಾಷಣ ಮಾಡಿದ ಕರ್ನಾಟಕ ಪ್ರದೇಶ ವಿಶ್ವಕರ್ಮರ ಮಹಾಸಂಘದ ರಾಜ್ಯಾಧ್ಯಕ್ಷರಾದ ಆರ್. ಶ್ರೀನಿವಾಸಚಾರ್ ಅವರು ಇಡೀ ಬ್ರಹ್ಮಾಂಡದ ಸೃಷ್ಠಿಕರ್ತ ವಿಶ್ವಕರ್ಮರು ಜಗತ್ತಿನ ಮೊದಲ ಎಂಜಿನಿಯರ್ ಎಂದರೇ ತಪ್ಪಾಗಲಾರದು. ಶ್ರೀಕೃಷ್ಣನ ದ್ವಾರಕಾ ನಗರ, ರಾವಣನ ಲಂಕಾ ನಗರ, ಪಾಂಡವರ ಇಂದ್ರಪ್ರಸ್ಥ, ಬಿಲ್ಲು, ಬಾಣ, ಕತ್ತಿ, ಗುರಾಣಿ ಸೇರಿದಂತೆ ಎಲ್ಲವೂ ಕುಶಲಕರ್ಮಿ ವಿಶ್ವಕರ್ಮರ ಕೊಡುಗೆಗಳೇ ಆಗಿವೆ. ದೇವಾನುದೇವತೆಗಳನ್ನು ಜಗತ್ತಿಗೆ ಪರಿಚಯಿಸಿದ ವಿಶ್ವಕರ್ಮರು ಭಾರತೀಯ ಸಂಸ್ಕøತಿಯ ಪ್ರತೀಕವಾಗಿದ್ದು, ಬೇಲೂರು, ಹಳೇಬೀಡು, ಐಹೊಳೆ, ಪಟ್ಟದಕಲ್ಲು, ಸೋಮನಾಥ ಪುರದಲ್ಲಿ ಸಂಸ್ಕøತಿಯನ್ನು ಸಾಕ್ಷೀಕರಿಸಿದ್ದಾರೆ ಎಂದರು.

ವಿಶ್ವಕರ್ಮ ಜನಾಂಗದ ಅಭಿವೃದ್ಧಿಗೆ ಸರ್ಕಾರ ವಿಶೇಷ ಅನುದಾನ ನೀಡಬೇಕು. ವಿಶ್ವಕರ್ಮ ಸಮುದಾಯ ಇಂದು ಸಂಕಷ್ಟದಲ್ಲಿದೆ. ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಆಶಯದಂತೆ ವಿಶ್ವಕರ್ಮ ಸಮುದಾಯ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಂಘಟನೆಯಾಗಬೇಕು. ಸಮುದಾಯಕ್ಕೆ ಎಲ್ಲಾ ಸೌಲಭ್ಯಗಳಿಗಾಗಿ ದೊರೆಯಬೇಕು. ಸರ್ಕಾರ ವಿಶ್ವಕರ್ಮ ಅಭಿವೃದ್ದಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಸಮುದಾಯಕ್ಕೆ ಸಾಮಾಜಿಕ ನ್ಯಾಯ ಹಾಗೂ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಮುದಾಯ ಭವನಗಳ ನಿರ್ಮಾಣವಾಗಬೇಕು ಎಂದು ಶ್ರೀನಿವಾಸಚಾರ್ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ. ಕೆ.ಎನ್. ಮಂಜುನಾಥ್, ಸಮುದಾಯದ ಮುಖಂಡರಾದ ಅನಂತಕುಮಾರ್, ಹೊನ್ನಹಳ್ಳಿ ಮಹೇಶ್, ಕುಮಾರ್, ಹರದನಹಳ್ಳಿ ಸುರೇಶ್, ಗಿರೀಶ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರವಾಸಿಮಂದಿರದಿಂದ ಶ್ರೀ ವಿಶ್ವಕರ್ಮರ ಭಾವಚಿತ್ರ ಮೆರವಣಿಗೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಚಾಲನೆ ನೀಡಿದರು. ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಜಿಲ್ಲಾಡಳಿತ ಭವನದಲ್ಲಿ ಅಂತ್ಯಗೊಂಡಿತು.

Leave a Reply

Your email address will not be published. Required fields are marked *