ನಗರದ ಸಿಮ್ಸ್ ಆಸ್ಪತ್ರೆಯಲ್ಲಿ ವಿಶ್ವ ಮೆದುಳಿನ ದಿನ ಆಚರಣೆ

ಚಾಮರಾಜನಗರ: ಜಿಲ್ಲಾಡಳಿ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಯ ಸಹಯೋಗದಲ್ಲಿ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದಡಿ ಇಂದು ವಿಶ್ವ ಮೆದುಳಿನ ದಿನವನ್ನು ಆಚರಿಸಲಾಯಿತು.

  ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಸಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಸಿ.ಎಸ್. ಮಾರುತಿ ಅವರು ಉದ್ಘಾಟಿಸಿ ಶುಭ ಹಾರೈಸಿದರು. 

 ಬಳಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂಪನ್ಮೂಲ ವ್ಯಕ್ತಿ ನರ ಶಸ್ತ್ರ ಚಿಕಿತ್ಸಕರಾದ ಡಾ. ರಾಜೇಶ್ ಅವರು ಮಾತನಾಡಿ ಮೆದುಳು ಮನುಷ್ಯನ ಜೀವನದಲ್ಲಿ ಬಹುಮುಖ್ಯವಾದ ಅಂಗ. ಮೆದುಳನ್ನು ರಕ್ಷಣೆ ಮಾಡಿಕೊಂಡರೆ ಪಾಶ್ರ್ವವಾಯು, ಅಪಸ್ಮಾರ, ಮರೆಗುಳಿ ಯಂತಹ ರೋಗಗಳನ್ನು ತಡೆಗಟ್ಟಬಹುದು ಎಂದರು. 

 ವ್ಯಾಯಾಮ, ಉತ್ತಮ ನಿದ್ರೆ, ದೈಹಿಕ ಚಟುವಟಿಕೆ, ಆರೋಗ್ಯಕರ ಹವ್ಯಾಸಗಳಾದ ಯೋಗ ಮತ್ತು ಧ್ಯಾನ, ಸಂಘಜೀವಿಯಾಗಿರುವುದು ಇವುಗಳನ್ನು ಮಾಡುವುದರಿಂದ ನಮ್ಮ ಮೆದುಳನ್ನು ಸಮತೋಲನದಲ್ಲಿಟ್ಟುಕೊಳ್ಳಬಹುದು. ವಾಹನ ಚಾಲನೆ ಮಾಡುವಾಗ ಹೆಲ್ಮೆಟೆ ಬಳಸುವುದು, ತಲೆಗೆ ಪೆಟ್ಟು ಬಿದ್ದಾಗ ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕು. ರಕ್ತದೊತ್ತಡ ಹಾಗೂ ಮಧುಮೇಹ ರೋಗಗಳನ್ನು ಸಮತೋಲನದಲ್ಲಿಡುವುದು ಸೇರಿದಂತೆ ಇನ್ನೂ ಕೆಲವು ಆರೋಗ್ಯ ಸಲಹೆಗಳನ್ನು ಡಾ. ರಾಜೇಶ್ ಅವರು ನೀಡಿದರು. 

  ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಚಿನ್ನಭೋವಿ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ (ಕಬಿ) ಯೋಜನೆಯ ಡಾ. ಪುಷ್ಪಾಂಕ್ ಯು ಕುದರ್, ಜಿಲ್ಲಾ ಸಂಯೋಜಕರಾದ ಎನ್. ಸತೀಶ್, ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಇದ್ದರು.

Leave a Reply

Your email address will not be published. Required fields are marked *