ಚಾಮರಾಜನಗರ: ಚಾಮರಾಜನಗರ ತಾಲೂಕಿನ ಮಸಣಾಪುರ ಗ್ರಾಮ ಪಂಚಾಯಿತಿಯಲ್ಲಿ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಕಾರ್ಯಕ್ರಮದಡಿ ವಿಶ್ವ ಮೆದುಳು ದಿನಾಚರಣೆ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ. ಚಂದ್ರಶೇಖರ್ ಅವರು ಮೆದುಳು ನಮ್ಮ ದೇಹದ ಪ್ರಮುಖ ಅಂಗವಾಗಿದ್ದು, ಆಲೋಚನೆ, ಚಲನೆ, ಭಾವನೆಗಳು ಮತ್ತು ಇಡೀ ದೇಹದ ಕಾರ್ಯ ವೈಖರಿಯನ್ನು ನಿಯಂತ್ರಿಸುತ್ತದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಡಾ. ಪುಷ್ಪಾಂಕ್ ಯು ಕುದರ್ ಅವರು ಮಾತನಾಡಿ ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ, ರಕ್ತದೊತ್ತಡ ಮತ್ತು ಮಧುಮೇಹ ನಿಯಂತ್ರಣ, ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರುವುದು ಮೆದುಳು ಆರೋಗ್ಯ ಕಾಪಾಡಲು ಸಹಕಾರಿಯಾಗುತ್ತದೆ ಎಂದರು.
ಬಿಇಎಫ್‍ಎಎಸ್‍ಟಿ ಬಗ್ಗೆ ಅಂದರೆ ಬ್ಯಾಲೆನ್ಸ್, ಐಸ್, ಫೇಸ್, ಆರ್ಮ್, ಸ್ಪೀಚ್, ಟೈಂ ಇದು ಪಾಶ್ರ್ವವಾಯು ರೋಗವನ್ನು ಗುರುತಿಸುವ ಲಕ್ಷಣಗಳಾಗಿವೆ. ಈ ಲಕ್ಷಣಗಳು ಕಂಡುಬಂದಲ್ಲಿ 4 ರಿಂದ 5 ಗಂಟೆಯೊಳಗೆ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಜಿಲ್ಲಾ ಸಂಯೋಜಕರಾದ ಸತೀಶ್ ಮಾತನಾಡಿ ಮೆದುಳಿನ ಖಾಯಿಲೆ ಲಕ್ಷಣ ಕಂಡುಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಅತ್ಯಗತ್ಯ. ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆದರೆ ರೋಗದ ತೀವ್ರತೆ ನಿಯಂತ್ರಿಸಬಹುದು. ಹಾಗೆಯೇ ಸಿಮ್ಸ್ ಆಸ್ಪತ್ರೆಯ ಕೊಠಡಿ ಸಂಖ್ಯೆ 164ರಲ್ಲಿ ಬ್ರೈನ್ ಹೆಲ್ತೆ ಕ್ಲಿನಿಕ್ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಪಾರ್ಶವಾಯು, ತಲೆನೋವು, ಮೂರ್ಛೆ ರೋಗ, ಮರೆವಿನ ಸಮಸ್ಯೆ ಸೇರಿದಂತೆ ವಿವಿಧ ನರÀರೋಗಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆ ನೀಡಲಾಗುತ್ತದೆ ಎಂದು ಹೇಳಿದರು.
ಹೊಂಗನೂರು ಪಿಎಚ್‍ಸಿ ಡಾ. ಮಮತಾ, ಕ್ಲಿನಿಕಲ್ ಸೈಕಾಲಿಜಿಸ್ಟ್ ಎಸ್. ಧನರಾಜ್, ಸಿಎಚ್‍ಒ ರವಿಕಿರಣ್, ಆಶಾ ಕಾರ್ಯಕರ್ತೆಯರು, ಮಸಣಾಪುರ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.