ಚಾಮರಾಜನಗರ: ದಲಿತ ಸಂಘರ್ಷ ಸಮಿತಿ ಬಗ್ಗೆ ಹಗುರವಾಗಿ ಮಾತನಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಬಹಿರಂಗವಾಗಿ ಕ್ಷಮೆಯಾಚಿ ಸಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ ಆಗ್ರಹಿಸಿದರು.
ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಟಿ.ನರಸೀಪುರದಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಅಂಬೇಡ್ಕರ್ ಹಾಗೂ ದಲಿತ ಸಂಘಟನೆಗಳ ಬಗ್ಗೆ ಪ್ರತಾಪ್ ಸಿಂಹ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ರಾಜ್ಯಕ್ಕೆ ಹರಡಿದ್ದೆ ಪ್ರೊ.ಬಿ.ಕೃಷ್ಣಪ್ಪ ಅವರ ದಸಂಸ ಸಂಘಟನೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅಂಬೇಡ್ಕರ್ ಅವರು ಕೇವಲ ಥಾಟ್ಸ್ ಆನ್ ಪಾಕಿಸ್ತಾನ್ ಪುಸ್ತಕವನ್ನು ಬರೆದಿಲ್ಲ. ಜಾತಿ ವಿನಾಶ, ಭಾರತದಲ್ಲಿ ಜಾತಿಗಳು ಸೇರಿದಂತೆ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳನ್ನು ಓದಿ ಬಳಿಕ ಸಾರ್ವಜನಿಕರ ಬಳಿ ಮಾತನಾಡಬೇಕು ಎಂದರು.
ನೀಲಿ ಶಾಲು, ನೀಲಿ ಬಾವುಟ ಎಂಬುದು ಅಂಬೇಡ್ಕರ್ ವಾದದ ವೈಶಾಲ್ಯತೆ, ಸೌಹಾರ್ದ ತೆ, ಸಾಮಾನತೆ, ಸೋದರತೆ ನ್ಯಾಯಮತ್ತು ಸ್ವಾಭಿಮಾನದ ಸಂಕೇತವಾಗಿದೆ. ಅಂಬೇಡ್ಕರ್ ಅವರು ಮೊಟ್ಟಮೊದಲು 1936ರಲ್ಲಿ ಸ್ಥಾಪಿಸಿದ ಇಂಡಿಪೆಂಡೆಂಟ್ ಲೇಬರ್ ಪಾರ್ಟಿ ಗೆ ನೀಲಿ ಬಣ್ಣದ ಬಾವುಟವನ್ನು ಆಯ್ಕೆ ಮಾಡಿಕೊಂಡರು. ಅಂತ ನೀಲಿ ಶಾಲಿನ ಬಗ್ಗೆ ಅದನ್ನು ಧರಿಸುವ ಸಮುದಾಯದ ಬಗ್ಗೆ ಅವಹೇಳನ ಕಾರಿ ಮಾತನಾಡಿರುವುದು ಖಂಡನೀಯ ವಾಗಿದೆ ಎಂದರು.
ದಲಿತ ಸಂಘರ್ಷ ಸಮಿತಿ ಡಿ.ಜಿ.ಸಾಗರ್ ಬಣದ ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ ಮಾತನಾಡಿ, ದಸಂಸ ಸಂಘಟನೆಗಳ ಬಗ್ಗೆ ಹಗುರವಾಗಿ ಮಾತನಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಅ.2 ರಂದು ಟಿ. ನರಸೀಪುರ ಚಲೋ ಚಳವಳಿಯನ್ನು ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ದಸಂಸ ಪದಾಧಿಕಾರಿಗಳು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಯೋಜಕ ಕೆರೆಹಳ್ಳಿ ಬಸವರಾಜು, ಜಿಲ್ಲಾಧ್ಯಕ್ಷ ಸುರೇಶ್ ರಾಮಸಮುದ್ರ, ಮಹಿಳಾ ಘಟಕದ ಜಿಲ್ಲಾ ಸಂಯೋಜಕಿ ಪ್ರಭಾವತಿ, ಸಂಘಟನಾ ಸಂಚಾಲಕ ದೊರೆಸ್ವಾಮಿ, ತಾಲೂಕು ಅಧ್ಯಕ್ಷ ಅನಿಲ್ ಹಾಜರಿದ್ದರು
