ಚಾಮರಾಜನಗರ: ಆಲಂಬೂರು ಏತನೀರಾವರಿಯ 4ನೇ ಹಂತದ ಬೊಮ್ಮನಹಳ್ಳಿಯ ಕೆರೆ, ಯರಗನಹಳ್ಳಿ ಸುವರ್ಣನಗರ ಕೆರೆ ಹಾಗೂ ಅರಕಲವಾಡಿ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಕೆರೆಯ ನೀರನ್ನು ಅವಲಂಬಿಸಿರುವ ರೈತರು ಮತ್ತು ನಾಗರಿಕರು ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಅವರಿಗೆ ಮನವಿ ಸಲ್ಲಿಸಿದರು.
ಬೊಮ್ಮನಹಳ್ಳಿ ನೀರಿನ ತೊಟ್ಟಿಯ ಬಳಿ ಎತ್ತರ ಇರುವ ಪೂರ್ವ ಭಾಗಕ್ಕೆ ಗೇಟ್‌ವಾಲ್ ಅಳವಡಿಸಿ, ತಗ್ಗಾದ ಪಶ್ಚಿಮ ಭಾಗದ ಕಡೆ ಯಾವುದೇ ಗೇಟ್ ಅಳವಡಿಸಿಲ್ಲ. ಆದುದರಿಂದ ಪೂರ್ವ ಭಾಗದ ಚಾಮರಾಜನಗರ ತಾಲ್ಲೂಕಿನ ಕೆರೆಗಳಾದ ಬೊಮ್ಮನಹಳ್ಳಿ ಕೆರೆ, ಯರಗನಹಳ್ಳಿ ಸುವರ್ಣನಗರ ಕೆರೆ ಮತ್ತು ಅರಕಲವಾಡಿ ಕೆರೆಗಳಿಗೆ ನೀರು ಸಮಪರ್ಕವಾಗಿ ಬರುತ್ತಿಲ್ಲ. ಈ ಅವೈಜ್ಞಾನಿಕವಾಗಿ ಅಳವಡಿಸಿರುವ ಗೇಟ್ ವಾಲ್‌ಅನ್ನು ನಿಷ್ಕ್ರಿಯಗೊಳಿಸಬೇಕು ಅಥವಾ ತೆರವುಗೊಳಿಸಬೇಕು.
ಈ ಯೋಜನೆಯಲ್ಲಿ 11 ಕೆರೆಗಳಿಗೂ ಪೈಪ್ ಲೈನ್ ಅಳವಡಿಸಲು ಆದೇಶಿಸಿದ್ದು, ಪಶ್ಚಿಮ ಭಾಗದ ಗುಂಡ್ಲುಪೇಟೆ ತಾಲ್ಲೂಕಿನ 8 ಕೆರೆಗಳಿಗೆ ಪೈಪ್ ಲೈನ್ ಅಳವಡಿಸದೇ ಇರುವುದರಿಂದ ನೀರಿನ ಪ್ರತಿಒತ್ತಡ ಸಿಗದೆ ಪೂರ್ವ ಭಾಗದ 3 ಕೆರೆಗಳಿಗೆ ನೀರು ತಾಂತ್ರಿಕವಾಗಿ ನಿಗಧಿಪಡಿಸಿರುವುದಕ್ಕಿಂತ ಬಹಳ ಕಡಿಮೆ ಬರುತ್ತದೆ. ಆದುದರಿಂದ ತಾಂತ್ರಿಕ ಆದೇಶದಂತೆ ಪೈಪ್ ಲೈನ್ ನ್ನು ಕಡ್ಡಾಯವಾಗಿ ಅಳವಡಿಸಲು ಕ್ರಮವಹಿಸಲು ಸೂಚಿಸಬೇಕು..
ಸ್ವಾಭಾವಿಕವಾದ ಕಾಲುವೆಗಳು ಕೆರೆಯಿಂದ ಕೆರೆಗೆ ಇದ್ದರು ಬರಪರಿಸ್ಥಿತಿಯಲ್ಲಿ ಹಾಗೂ ಮಳೆಯು ಕೊರತೆಯಾದಾಗ ನೀರಿನ ಲಭ್ಯತೆ ಕಡಿಮೆ ಇರುವಾಗ ಲಭ್ಯವಿರುವ ನೀರನ್ನು ಎಲ್ಲಾ ಭಾಗಕ್ಕೂ ಸಮನಾಗಿ ಹಂಚಿಕೆ ಮಾಡಲು ಈ ಯೋಜನೆಯ 4 ಹಂತದ ಎಲ್ಲಾ ಕೆರೆಗಳಿಗೂ ಪೈಪ್ ಲೈನ್ ಅಳವಡಿಸಬೇಕು. ಇಲ್ಲದಿದ್ದಲ್ಲಿ ನೀರಿನ ಅಭಾವವಿರುವ ಸನ್ನಿವೇಶದಲ್ಲಿ ಯೋಜನೆಯ ಕೊನೆಯಲ್ಲಿರುವ ಕೆರೆಗಳಿಗೆ ನೀರು ತಲುಪಿಸಲು ಸಾಧ್ಯವಾಗದಿರುವುದರಿಂದ ಉದ್ದೇಶಿತ ಯೋಜನೆ ವಿಫಲವಾಗಿ ಈ ಯೋಜನೆಗೆ ಒಳಪಡುವ ಎಲ್ಲಾ ರೈತರು ಹಾಗೂ ನಾಗರೀಕರಿಗೂ ಸಮಪ್ರಮಾಣದ ನ್ಯಾಯಸಿಗುವುದಿಲ್ಲ. ಆದುದರಿಂದ ಎಲ್ಲಾ ಹಂತದ ಕೆರೆಗಳಿಗೂ ಪೈಪ್‌ಲೈನ್ ಅಳವಡಿಸಲು ಕ್ರಮವಹಿಸಬೇಕೆಂದು ಸೇವಿಸಬೇಕು.
ಉತ್ತೂರು ಕೆರೆಯಿಂದ ಬೊಮ್ಮನಹಳ್ಳಿ ನೀರಿನ ತೊಟ್ಟಿ ಏಕಕಾಲದಲ್ಲಿ ಕನಿಷ್ಟ 2 ಮೋಟಾರ್ ಪಂಪ್ ಗಳಿಂದ ನೀರನ್ನು ಹರಿಯಬಿಡಬೇಕು. ಇಲ್ಲದಿದ್ದರೆ ತೊಟ್ಟಿಯಿಂದ 2 ಭಾಗಕ್ಕೂ ನಿಗಧಿತ ಪ್ರಮಾಣದಲ್ಲಿ ನೀರು ಹರಿಯುವುದಿಲ್ಲ. ಈ ಯೋಜನೆಯ 3ನೇ ಹಂತದಲ್ಲಿಯೇ ಗುರುತ್ವಾಕರ್ಷಣಾ ಚಲನೆಯಲ್ಲಿಯೇ ಅಂತರದಲ್ಲಿರುವ ಕಿಲಗೆರೆ ಕೆರೆಯಿಂದಲೇ ಅರಕಲವಾಡಿ ಕೆರೆಗೆ ನೀರು ಬರುವ ಅವಕಾಶವಿದ್ದು, ಅರಕಲವಾಡಿ ಕೆರೆಯು ಸುಮಾರು 83.00 ಎಕರೆ ವಿಸ್ತೀರ್ಣ ದೊಡ್ಡಕೆರೆಯಾಗಿರುತ್ತದೆ. ಈ ಯೋಜನೆಯನ್ನು ಬಿಟ್ಟು ಸುಮಾರು 17-18 ಕಿ.ಮೀ. ಮುಖಾಂತರ 4ನೇ ಹಂತದ ಯೋಜನೆಗೆ ಸೇರಿಸಿದ್ದು, ಇದರಿಂದ ಅನಾವಶ್ಯಕ ವಿದ್ಯುತ್ ವೆಚ್ಚ ಹಾಗೂ ನೀರಿನ ನಷ್ಟ ಎರಡೂ ಆಗುತ್ತಿದ್ದು, ಈ ವಿಚಾರವಾಗಿ ನೀರಾವರಿ ತಾಂತ್ರಿಕ ತಜ್ಞರಿಗೆ ಇದನ್ನು ಪರಿಶೀಲಿಸಿ ಕ್ರಮಕೈಗೊಳ್ಳಬೇಕು.
ಈ ಯೋಜನೆಗೆ ನೀರು ಬಿಡಲು ವೇಳಾಪಟ್ಟಿ ನಿಗಧಿಪಡಿಸಿದ್ದರೆ ಆದ್ಯತೆ ಮತ್ತು ಜೇಷ್ಠತೆ ಆಧಾರದಲ್ಲಿ ಕಟ್ಟುನಿಟ್ಟಾಗಿ ನೀರು ಬಿಡಲು ಸೂಚಿಸಿ. ನೀರನ್ನು ನ್ಯಾಯಯುತವಾಗಿ ಎಲ್ಲರು ಪಡೆಯಲು ಅವಕಾಶ ಮಾಡಿ ಕೊಡಬೇಕು.ಪೈಪ್ ಲೈನ್ ಅಳವಡಿಕೆ ಆಗಿದ್ದರೂ ನೀರಿನ ಅಭಾವವಿಲ್ಲದೆ ಹೆಚ್ಚು ನೀರು ಲಭ್ಯವಿದ್ದಂತಹ ಪರಿಸ್ಥಿತಿಯಲ್ಲಿ ಸ್ವಾಭಾವಿಕವಾದ ಹಳ್ಳಗಳ ಮುಖಾಂತರವು ನೀರನ್ನು ಹರಿಯಬಿಡಬಹುದು. ಆದುದರಿಂದ ಈ ವಿಚಾರವನ್ನು ಈ ಯೋಜನೆಯ ಭಾಗದ ಜನರಿಗೆ ಮನವರಿಕೆ ಮಾಡಿಸಬೇಕು. ಲಭ್ಯವಿರುವ ನೀರನ್ನು ನ್ಯಾಯಯುತವಾಗಿ ಎಲ್ಲರಿಗೂ ಸಮನಾಗಿ ಹಂಚಿಕೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ರೈತ ಮುಖಂಡರಾದ ಅರಕಲವಾಡಿ ಗುರುಸ್ವಾಮಿ, ಜಿ.ಪಂ.ಮಾಜಿ ಸದಸ್ಯ ಅರಕಲವಾಡಿ ಎಸ್.ಸೋಮನಾಯಕ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘ, ಅಜಯ್, ಕೆಎಂಎಫ್ ನಿವೃತ್ತ ಅಧಿಕಾರಿ ಜವರಯ್ಯ, ವೈ.ಪಿ.ರಾಜೇಂದ್ರ, ಶಂಭಲಿಂಗಪ್ಪ, ನಾಗರಾಜು ಯಣಗುಂಬ , ರಾಜಶೇಖರಮೂರ್ತಿ ಇತರರು ಹಾಜರಿದ್ದರು.
