ಚಾಮರಾಜನಗರ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಬಾರಿಯ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 160232 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಜಿ. ಪ್ರಭಾವತಿ ಅವರು ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯದ ಎ.ಡಿ.ಆರ್. ಕಟ್ಟಡದ ಸಭಾಂಗಣದಲ್ಲಿಂದು ಲೋಕ್ ಅದಾಲತ್ ಸಂಬಂಧ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸರ್ವರಿಗೂ ನ್ಯಾಯ ಪರಿಕಲ್ಪನೆಯಡಿ ರಾಜಿಯೋಗ್ಯ ಪ್ರಕರಣಗಳನ್ನು ಗುರುತಿಸಿ, ಶೀಘ್ರ ಹಾಗೂ ತ್ವರಿತವಾಗಿ ಪ್ರಕರಣಗಳನ್ನು ಇತ್ಯರ್ತಪಡಿಸಿ ಜನಸಾಮಾನ್ಯರಿಗೆ ನ್ಯಾಯ ಒದಗಿಸುವ ಸದುದ್ದೇಶದಿಂದ ಇದೇ ತಿಂಗಳ 11ರಂದು ರಾಷ್ಟ್ರೀಯ ಲೋಕ್ ಅದಾಲತ್ ಅನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸೇರಿದಂತೆ ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಯಳಂದೂರು ತಾಲೂಕು ಕಾನೂನು ಸೇವಾ ಸಮಿತಿಗಳಲ್ಲಿ ಆಯೋಜಿಸಲಾಗಿತ್ತು ಎಂದರು.
ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರಗಳ ನಿರ್ದೇಶನದ ಮೇರೆಗೆ ಏರ್ಪಡಿಸಲಾಗಿದ್ದ ಈ ವರ್ಷದ 2ನೇ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಜಿಲ್ಲೆಯ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 4602 ಹಾಗೂ 155630 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿದಂತೆ ಒಟ್ಟು 160232 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ದಂಡ ಹಾಗೂ ಪರಿಹಾರ ರೂಪದಲ್ಲಿ ನ್ಯಾಯಾಲಯದ 4602 ಪ್ರಕರಣಗಳಿಂದ 12,65,02,460 ರೂ.ಗಳು ಹಾಗೂ ವ್ಯಾಜ್ಯಪೂರ್ವ 155630 ಪ್ರಕರಣಗಳಿಂದ 16,24,24,629 ರೂ.ಗಳು ಸೇರಿದಂತೆ ಒಟ್ಟು 28,89,27,089 ರೂ. ಗಳನ್ನು ಸಂಗ್ರಹಿಸಲಾಗಿದೆ. ಅಲ್ಲದೆ ಜುಲೈ 18ರಂದು ನಡೆದ ವಿಶೇಷ ಲೋಕ್ ಅದಾಲತ್‍ನಲ್ಲಿ ಲಿಖಿತ ವರ್ಗಾವಣೆ ಅಧಿನಿಯಮ ಕಲಂ 138ರಡಿ ದಾಖಲಾಗಿದ್ದ (ಚೆಕ್ ಅಮಾನ್ಯ) 33 ಪ್ರಕರಣಗಳಿಂದ 71,41,375 ರೂ ಸೇರಿದಂತೆ ಒಟ್ಟಾರೆ 160265 ಪ್ರಕರಣಗಳಿಂದ 29,60,68,464 ರೂ.ಗಳನ್ನು ರೆಕವರಿ ಮಾಡಲಾಗಿದೆ ಎಂದು ಹೇಳಿದರು.
ಈ ಬಾರಿಯ ಲೋಕ್ ಅದಾಲತ್‍ನಲ್ಲಿ ಕಳೆದ 10-15 ವರ್ಷಗಳಿಂದ ಬಾಕಿ ಇದ್ದ ಸಾಕಷ್ಟು ಪ್ರಕರಣಗಳು ಇತ್ಯರ್ಥಗೊಂಡಿದ್ದು, ಈ ಬಾರಿ ಇತ್ಯರ್ಥಗೊಂಡಿರುವ 160232 ಪ್ರಕರಣಗಳಲ್ಲಿ 13 ಕೌಟುಂಬಿಕ ಕಲಹ, ಪತಿ-ಪತ್ನಿ ಜೀವನಾಂಶ ಕೋರಿದ್ದ 3 ಹಾಗೂ ಹಿರಿಯ ನಾಗರಿಕರ 8 ಪ್ರಕರಣಗಳು ಸೇರಿವೆ. ಲೋಕ್ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕದ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಪ್ರಕರಣಗಳ ಇತ್ಯರ್ಥ ಪ್ರಕ್ರಿಯೆ ತೃಪ್ತಿ ನೀಡಿರುವುದಾಗಿ ತಿಳಿಸಿದ್ದು, ಸೆಪ್ಟೆಂಬರ್ 12ರಂದು ನಡೆಯುವ ಮುಂದಿನ ಲೋಕ್ ಅದಾಲತ್ ಕಾರ್ಯಕ್ರಮಕ್ಕೆ ಈಗಿನಿಂದಲೇ ಸಿದ್ದತೆ ಆರಂಭಿಸುವಂತೆ ಸೂಚಿಸಿರುವುದಾಗಿ ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಪೂರ್ವಯೋಜಿತವಾಗಿ ಲೋಕ್ ಅದಾಲತ್ ಬಗ್ಗೆ ವ್ಯಾಪಕ ಅರಿವು ಮೂಡಿಸಲಾಗುತ್ತದೆ. ಇದರಿಂದ ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಇತ್ಯರ್ಥದ ಸಂಖ್ಯೆ ಹೆಚ್ಚಾಗುತ್ತಿದೆ. ಜನರ ಸಮಸ್ಯೆ ಪರಿಹರಿಸುವುದು, ಕುಟುಂಬಗಳ ಬಾಂಧವ್ಯ ಗಟ್ಟಿಗೊಳಿಸುವುದು ಲೋಕ್ ಅದಾಲತ್‍ನ ಪ್ರಮುಖ ಉದ್ದೇಶವಾಗಿದೆ. ವ್ಯಾಜ್ಯಪೂರ್ವ ರಾಜಿಯೋಗ್ಯ ಪ್ರಕರಣಗಳಲ್ಲಿ ಯಾವುದೇ ಕಕ್ಷಿದಾರರನ್ನು ಬಲವಂತದ ರಾಜಿಗೆ ಒಳಪಡಿಸದೇ ಇತ್ಯರ್ಥಕ್ಕಾಗಿ ಮನವೊಲಿಸಲಾಗುತ್ತದೆ. ಇದರಿಂದ ಅಮೂಲ್ಯ ಜನರ ಸಮಯ, ಹಣ ಉಳಿತಾಯವಾಗಲಿದೆ. ಲೋಕ್ ಅದಾಲತ್ ಯಶಸ್ಸಿಗಾಗಿ ಸಹಕಾರ ನೀಡಿದ ಎಲ್ಲಾ ನ್ಯಾಯಾಧೀಶರಿಗೆ, ವಕೀಲರಿಗೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸೇರಿದಂತೆ ವಿವಿಧ ಇಲಾಖೆಗಳು, ಬ್ಯಾಂಕ್ ಅಧಿಕಾರಿಗಳಿಗೆ ಅಭಿನಂದನೆಗಳನ್ನು ಜಿಲ್ಲಾ ನ್ಯಾಯಾಧೀಶರಾದ ಜಿ. ಪ್ರಭಾವತಿ ಅವರು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.