ಜಿಲ್ಲೆಯಲ್ಲಿ ಉದ್ದಿಮೆ ಸ್ಥಾಪಿಸುವವರಿಗೆ ಎಲ್ಲ ನೆರವು, ಸಹಕಾರ : ಜಿಲ್ಲಾಧಿಕಾರಿ ಶ್ರೀರೂಪ

ಚಾಮರಾಜನಗರ:  ಜಿಲ್ಲೆಯಲ್ಲಿ ಉದ್ದಿಮೆ ಸ್ಥಾಪಿಸುವವರಿಗೆ ಜಿಲ್ಲಾಡಳಿತದಿಂದ ಎಲ್ಲ ಸಹಕಾರ ನೀಡಲಿದ್ದು, ಲಭ್ಯವಿರುವ ಅವಕಾಶಗಳನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಸಲಹೆ ಮಾಡಿದರು. 

  ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಏSಈಅ) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

  ಜಿಲ್ಲೆಯು ಅಭಿವೃದ್ದಿ ಹೊಂದುತ್ತಿದ್ದು, ಇಲ್ಲಿ ಉದ್ದಿಮೆ, ಕೈಗಾರಿಕೆ ಸ್ಥಾಪನೆಗೆ ಸಾಕಷ್ಟು ಅವಕಾಶಗಳು ಇವೆ. ಜಿಲ್ಲೆಯ ಬೆಳವಣಿಗೆಗೆ ಪೂರಕವಾಗಿರುವ ಉದ್ದಿಮೆಗಳನ್ನು ಆರಂಭಿಸಬಹುದಾಗಿದೆ. ಉದ್ಯಮಗಳನ್ನು ಸ್ಥಾಪಿಸುವುದರಿಂದ ಯುವಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿದ್ದು, ಬೇರೆ ಕಡೆಗೆ ವಲಸೆ ಹೋಗುವುದು ತಪ್ಪಲಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು. 

  ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಕೈಗಾರಿಕೆ ಚಟುವಟಿಕೆಗಳ ಘಟಕಗಳಿಗೆ ಸಾಲ ಸೌಲಭ್ಯ ಹಾಗೂ ಸಹಾಯಧನ ನೀಡಲಿದೆ. ಮಹಿಳಾ ಉದ್ಯಮಿಗಳಿಗು ಸಹ ಹಣಕಾಸು ನೆರವನ್ನು ಕೊಡಲಾಗುತ್ತಿದ್ದು, ಜಿಲ್ಲೆಯ ಆಸಕ್ತ ಉದ್ದಿಮೆದಾರರು ಇದರ ಸದುಪಯೋಗ ಮಾಡಿಕೊಳ್ಳಬೇಕು. ಉದ್ದಿಮೆದಾರರಿಗೆ ಜಿಲ್ಲಾಡಳಿತ ಅಗತ್ಯವಿರುವ ಎಲ್ಲ ಸಹಾಯ ಸಹಕಾರ ನೀಡಲಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ಹೇಳಿದರು. 

   ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಎಸ್.ಎಫ್.ಸಿ. ಪ್ರಧಾನ ವ್ಯವಸ್ಥಾಪಕರಾದ ಪಿ.ಎಂ. ಮುರಳೀಧರ್ ಅವರು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಕಳೆದ 67 ವರ್ಷಗಳಿಂದ ಕೈಗಾರಿಕೆ ಚಟುವಟಿಕೆಗಳಿಗೆ ಸಾಲ ಸಹಾಯಧನ ನೀಡುವ ಮೂಲಕ ಹೊಸ ಉದ್ಯೋಗ ಸೃಷ್ಠಿಗೆ ನೆರವಾಗುತ್ತಿದೆ. ಇಂದು ಭಾರತದಲ್ಲಿ ಹೆಸರು ಮಾಡಿರುವ ಹಲವು ಸಂಸ್ಥೆಗಳು ಆರಂಭದಲ್ಲಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ಸಾಲ ಪಡೆದಿದ್ದವು ಎಂಬುದು ಗಮನಾರ್ಹವಾಗಿದೆ ಎಂದರು. 

  ಜಿಲ್ಲೆಯಲ್ಲಿ ಹಲವು ಕೈಗಾರಿಕೆ ಉದ್ದಿಮೆಗಳನ್ನು ಆರಂಭಿಸಲು ಅವಕಾಶವಿದೆ. ವಿಶೇಷವಾಗಿ ಕೃಷಿ, ಹೈನುಗಾರಿಕೆ  ಆಧಾರಿತ ಘಟಕಗಳು, ಗ್ರಾನೈಟ್, ಆಹಾರ ಉದ್ಯಮಗಳನ್ನು ಸ್ಥಾಪಿಸಬಹುದಾಗಿದೆ. ಇಲ್ಲಿ ಸಿದ್ದ ಉಡುಪುಗಳನ್ನು ತಯಾರಿಸುವ ದೊಡ್ಡ ಮಟ್ಟದ ಗಾಮೆರ್ಂಟ್ಸ್ ಕಂಪನಿಗಳನ್ನು ಆಹ್ವಾನಿಸಬೇಕಿದೆ. ಇದರಿಂದ ಸ್ಥಳೀಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಪಿ.ಎಂ. ಮುರಳೀಧರ್ ಅವರು ತಿಳಿಸಿದರು. 

   ಚಾಮರಾಜನಗರದ ಕೆ.ಎಸ್.ಎಫ್.ಸಿ. ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಎಂ.ಆರ್. ಪ್ರಮೀಳಾ ಅವರು ಮಾತನಾಡಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ತ್ವರಿತ ಗತಿಯಲ್ಲಿ ಸಾಲ ಸೌಲಭ್ಯವನ್ನು ಉದ್ದಿಮೆದಾರರಿಗೆ ಒದಗಿಸಲಿದೆ. ಬ್ಯಾಂಕುಗಳಲ್ಲಿ ಅನುಭವ ಹೊಂದಿರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆದರೆ ಕೆ.ಎಸ್.ಎಫ್.ಸಿ ಯಲ್ಲಿ ಮೊದಲ ಬಾರಿಗೆ ಉದ್ದಿಮೆ ಆರಂಭಿಸುವವರಿಗೂ ಸಹ ಆರ್ಥಿಕ ನೆರವು ನೀಡುವ ಮೂಲಕ ಹೆಚ್ಚಿನ ಉತ್ತೇಜನ ಕೊಡುತ್ತಿದೆ ಎಂದರು. 

   ಜಿಲ್ಲಾ ಕೈಗಾರಿಕಾ ಕೇಂದ್ರದ (ಡಿಐಸಿ) ಜಂಟಿ ನಿರ್ದೇಶಕರಾದ ದೊರೈರಾಜ್, ಕರ್ನಾಟಕ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮೈಸೂರಿನ ಅಭಿವೃದ್ಧಿ ಅಧಿಕಾರಿ ಕೆ.ಡಿ. ಮಹೇಶ್, ಚಾಸಿಯಾ ಉಪಾಧ್ಯಕ್ಷರಾದ ನರೇಂದ್ರಬಾಬು, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಮೈಸೂರಿನ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ವೇದಾವತಿ, ಚಾಮರಾಜನಗರ ಶಾಖಾ ವ್ಯವಸ್ಥಾಪಕರಾದ ಪುಟ್ಟಮ್ಮಣಿ, ಮೈಸೂರು ಎಸ್ಸಿ ಎಸ್ಟಿ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ವಿಜಯಶಂಕರ್, ವೀರನಪುರ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಸದಾಶಿವ, ಜಿಲ್ಲೆಯ ಉದ್ಯಮಿ ನಾಗಯ್ಯ, ಡಿಐಸಿಯ ಸಹಾಯಕ ನಿರ್ದೇಶಕರಾದ ವಿಜಯಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *