ಚಾಮರಾಜನಗರ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಮತದಾರರ ಪಟ್ಟಿಯ ಪಾರದರ್ಶಕ ತಯಾರಿಕೆಗೆ ಪ್ರಮುಖ ರಾಜಕೀಯ ಪಕ್ಷಗಳ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026ರ ಸಂಬಂಧ ಗಣತಿ ನಮೂನೆ ವಿತರಣೆ ಹಾಗೂ ಮತದಾರರ ಗಣಕೀಕರಣ ಕೆಲಸ ಕಾರ್ಯಗಳ ಪ್ರಗತಿ ಕುರಿತು ನೊಂದಾಯಿತ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಜಿಲ್ಲೆಯಲ್ಲಿ ವೇಗವಾಗಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದ್ದು, ಮತದಾರರಿಗೆ ಗಣತಿ ನಮೂನೆ ವಿತರಣೆ ಹಾಗೂ ಗಣಕೀಕರಣ ಪ್ರಕ್ರಿಯೆಯಲ್ಲಿ ಜಿಲ್ಲೆ ಮುಂಚೂಣಿಯಲ್ಲಿದೆ. ಜಿಲ್ಲೆಯಲ್ಲಿ ಪುರುಷರು, ಮಹಿಳೆಯರು ಹಾಗೂ ಇತರರು ಸೇರಿದಂತೆ ಒಟ್ಟು 8,80,224 ಮತದಾರರಿದ್ದು, ಈಗಾಗಲೇ ಎಲ್ಲ ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಈ ಪೈಕಿ ಜುಲೈ 22ರ ಬೆಳಿಗ್ಗೆ 8 ಗಂಟೆಯವರೆಗೆ 6,91,988 ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಗಣತಿ ನಮೂನೆ ವಿತರಣೆ ಸಂದರ್ಭದಲ್ಲಿ ಕಂಡುಬಂದಿರುವ ಗೈರು, ಸ್ಥಳಾಂತರ, ನಿಧನ, 2 ಕಡೆ ಹೆಸರು ಇರುವವರು ಹಾಗೂ ಇತರೆ ಕಾರಣಗಳಿರುವ ಒಟ್ಟು 50,099 ಮತದಾರರನ್ನು ಆಯಾ ವಿಧಾನಸಭಾ ಕ್ಷೇತ್ರದ ಮತಗಟ್ಟೆವಾರು ಗುರುತಿಸಲಾಗಿದೆ. ನೊಂದಾಯಿತ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಈ ಬಗ್ಗೆ ತಮ್ಮ ಸಲಹೆ, ಅಭಿಪ್ರಾಯ ನೀಡಿದ್ದಲ್ಲಿ ನಿಯಮಾನುಸಾರ ಪರಿಶೀಲಿಸಲಾಗುವುದು. ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿ ಸೇರ್ಪಡೆಯಿಂದ ಬಿಟ್ಟುಹೋಗದಂತೆ ತಡೆಯುವುದು ಪರಿಷ್ಕರಣೆ ಕಾರ್ಯದ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಮತಗಟ್ಟೆವಾರು ಗಣತಿ ನಮೂನೆಗಳ ವಿತರಣೆಯಲ್ಲಿ ವ್ಯತ್ಯಾಸವಾಗಬಾರದು. ಆಯಾ ಮತಗಟ್ಟೆಗಳಿಗೆ ಸ್ಥಳೀಯ ಮತಗಟ್ಟೆ ಅಧಿಕಾರಿಗಳನ್ನೆ ನಿಯೋಜಿಸಬೇಕು. 5ರಿಂದ 10 ವಾರ್ಡ್‍ಗಳಿಗೆ ಸಹಾಯವಾಣಿ ತೆರೆಯಬೇಕು. 2004ರಲ್ಲಿ ಮತದಾನ ಮಾಡಿದ ಕೆಲವರ ಗಣತಿ ನಮೂನೆ ಶೀಘ್ರವಾಗಿ ಜನರೇಟ್ ಆಗಬೇಕು. 18 ವರ್ಷ ತುಂಬಿದ ಹೊಸಬರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಫಾರಂ-6 ಅನ್ನು ಮತಗಟ್ಟೆ ಅಧಿಕಾರಿಗಳು ತ್ವರಿತವಾಗಿ ವಿತರಿಸಬೇಕು. ಜಿಲ್ಲೆಯ ಹನೂರು ಭಾಗದಲ್ಲಿ (2 ಕಡೆ ಹೆಸರು ಇರುವ ಪಟ್ಟಿ) ಡೂಪ್ಲಿಕೇಷನ್ ಆಗುತ್ತಿರುವುದನ್ನು ಪರಿಶೀಲಿಸಿ ಸರಿಪಡಿಸಬೇಕು. ಗಣತಿ ನಮೂನೆಗಳು ಸಂಪೂರ್ಣ ವಿತರಣೆಯಾಗಿದೆ ಎಂದು ಹೇಳಲಾಗುತ್ತಿದೆ. ಕೆಲವೆಡೆ ನಮೂನೆಗಳು ವಿತರಣೆಯಾಗಿಲ್ಲ ಎಂಬುದು ಸೇರಿದಂತೆ ಇತರೆ ಅಭಿಪ್ರಾಯ, ಸಲಹೆಗಳನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಮಂಡಿಸಿದರು.
ಸಲಹೆ, ಅಭಿಪ್ರಾಯಗಳನ್ನು ಆಲಿಸಿ ಮಾತನಾಡಿದ ಜಿಲ್ಲಾಧಿಕಾರಿ ಶ್ರೀರೂಪ ಅವರು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಪರಿಷ್ಕøತ ವೇಳಾಪಟ್ಟಿ ಈಗಾಗಲೇ ಪ್ರಕಟವಾಗಿದ್ದು, ಕರಡು ಮತದಾರರ ಪಟ್ಟಿ ಆಗಸ್ಟ್ 17ರಂದು ಪ್ರಕಟವಾಗಲಿದೆ. ನಂತರ ಈಗಾಗಲೇ ಗುರುತಿಸಲಾಗಿರುವ ಗೈರು, ಸ್ಥಳಾಂತರ, ನಿಧನ, 2 ಕಡೆ ಹೆಸರು ಇರುವವರು ಬಗ್ಗೆ ಪುನರ್ ಪರಿಶೀಲನೆ ನಡೆಸುವಂತೆ ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಅಲ್ಲದೆ ಗಣತಿ ನಮೂನೆಗಳನ್ನು ಮತದಾರರಿಗೆ ವಿತರಿಸುವ ಸಂದರ್ಭದಲ್ಲಿ ಫಾರಂ-6 ಅನ್ನು 18 ವರ್ಷ ತುಂಬಿದ ಅರ್ಹರಿಗೆ ವಿತರಿಸುವಂತೆ ಎಲ್ಲಾ ಬಿ.ಎಲ್.ಒ ಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಯವರು ಹೇಳಿದರು.
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಅನುಕೂಲವಾಗುವಂತೆ ತೆರೆಯಲಾಗಿರುವ ಸಹಾಯವಾಣಿ ಮಾದರಿಯಲ್ಲಿ ಫೆಸಿಲಿಟಿ ಕೇಂದ್ರಗಳನ್ನು ತೆರೆಯಲಾಗಿದೆ. ಎಲ್ಲಾ ತಾಲೂಕುಗಳ ಬಿ.ಎಲ್.ಒ ಗಳು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಪ್ರತಿತಿಂಗಳು ಸಭೆ ನಡೆಸಿ ಸಲಹೆ, ಸಹಕಾರ ಪಡೆಯುವಂತೆ ತಿಳಿಸಲಾಗಿದೆ. ಈಗಾಗಲೇ ಗುರುತಿಸಲಾಗಿರುವ ಮತದಾರರ ವಿವರಗಳನ್ನು ಖಚಿತಪಡಿಸಿಕೊಂಡು ಮತಗಟ್ಟೆ ಅಧಿಕಾರಿಗಳಿಗೆ (ಬಿ.ಎಲ್.ಒ) ಮಾಹಿತಿ ನೀಡಲು ತಾವು ನೇಮಕ ಮಾಡಿರುವ ಬಿ.ಎಲ್.ಎ-2 ಗಳಿಗೆ ಅವಶ್ಯ ನಿರ್ದೇಶನ ನೀಡುವಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.
ಇದೇ ವೇಳೆ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಮತದಾರರಿಗೆ ಗಣತಿ ನಮೂನೆ ಹಂಚಿಕೆ ಹಾಗೂ ಗಣಕೀಕರಣ ಪ್ರಕ್ರಿಯೆಯು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವೇಗವಾಗಿ ನಡೆಯುತ್ತಿದೆ. ನಗರಪ್ರದೇಶದಲ್ಲಿ ಅಲ್ಪ ವಿಳಂಬವಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಲಾಗುವುದು ಎಲ್ಲಾ ಬಿ.ಎಲ್.ಒ ಗಳು ಸ್ವಯಂ ಪ್ರೇರಣೆಯಿಂದ ಮತದಾರರಿಗೆ ಕರೆಮಾಡಿ ಗಣತಿ ನಮೂನೆಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಾದ್ಯಂತ ಬಿ.ಎಲ್.ಒ ಮೇಲ್ವಿಚಾರಕರು ಕ್ರೀಯಾಶೀಲತೆಯಿಂದ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ನಗರಸಭೆ ಪೌರಾಯುಕ್ತರಾದ ಪರಶುರಾಮ ಛಲವಾದಿ, ನೊಂದಾಯಿತ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎಚ್.ಎಸ್. ತೋಂಟದಾರ್ಯಸ್ವಾಮಿ, ಎನ್. ನಾಗಯ್ಯ, ಎಸ್. ಬಾಲಸುಬ್ರಮಣ್ಯ, ಶಕುಂತಲ, ಆರ್. ಪುರುಷೋತ್ತಮ, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.