ಚಾಮರಾಜನಗರ: ಜಿಲ್ಲಾ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ ಮಕ್ಕಳನ್ನು ಯಾವುದೇ ಧಾರ್ಮಿಕ ಆಚರಣೆ, ಜಾತ್ರೆ, ಉತ್ಸವ, ಹಬ್ಬ, ಸಮುದಾಯ ಕಾರ್ಯಕ್ರಮ ಅಥವಾ ಇತರೆ ಸಾರ್ವಜನಿಕ ಖಾಸಗಿ ಕಾರ್ಯಕ್ರಮಗಳಿಗೆ ಊಟ ಅಥವಾ ಇತರೆ ಉದ್ದೇಶಕ್ಕಾಗಿ ಶಾಲೆಯ ವತಿಯಿಂದ ಕರೆದೊಯ್ಯುವುದನ್ನು ಅಥವಾ ಕಳುಹಿಸುವುದನ್ನು ಕಡ್ಡಾಯವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಶ್ರೀರೂಪ ಅವರು ಆದೇಶಿಸಿದ್ದಾರೆ.
ಚಾಮರಾಜನಗರ ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ಬಂಡಿ ಉತ್ಸವದ ಧಾರ್ಮಿಕ ಕಾರ್ಯಕ್ರಮ ಜರುಗಿದ್ದು, ಸದರಿ ಕಾರ್ಯಕ್ರಮದಲ್ಲಿ ಗ್ರಾಮಸ್ಥರೆಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದ್ದ ಹಿನ್ನೆಲೆಯಲ್ಲಿ ಗ್ರಾಮದ ಮುಖಂಡರು ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್.ಡಿ.ಎಂಸಿ) ಸದಸ್ಯರು ಕೆಬ್ಬೇಪುರ ಗ್ರಾಮದ ಸರ್ಕಾರಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಮಧ್ಯಾಹ್ನದ ಊಟಕ್ಕಾಗಿ ಸದರಿ ಕಾರ್ಯಕ್ರಮದ ಸ್ಥಳಕ್ಕೆ ಕಳುಹಿಸುವಂತೆ ಶಾಲೆಯ ಮುಖ್ಯೋಪಾಧ್ಯಾಯರಿಗೆ ತಿಳಿಸಿರುತ್ತಾರೆ. ಕೆಬ್ಬೇಪುರ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಬಂಡಿ ಉತ್ಸವದ ಊಟಕ್ಕೆ ಕರೆದೊಯ್ದ ಸಂದರ್ಭದಲ್ಲಿ ದಲಿತ ಸಮುದಾಯಕ್ಕೆ ಸೇರಿದ 18 ವಿದ್ಯಾರ್ಥಿಗಳಿಗೆ ಊಟ ನೀಡಲು ನಿರಾಕರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾಧ್ಯಮದಲ್ಲಿ ಸುದ್ದಿ ಪ್ರಕಟವಾಗಿರುತ್ತದೆ.
ವಿದ್ಯಾರ್ಥಿಗಳಲ್ಲಿ ಯಾವುದೇ ರೀತಿಯ ಜಾತಿ, ಧರ್ಮ, ಸಮುದಾಯ ಅಥವಾ ಇತರೆ ಆಧಾರದ ತಾರತಮ್ಯಕ್ಕೆ ಅವಕಾಶವಿಲ್ಲದಂತೆ ಶಾಲಾ ವಿದ್ಯಾರ್ಥಿಗಳ ಸುರಕ್ಷತೆ, ಸಮಾನತೆ, ಘನತೆ ಹಾಗೂ ಶೈಕ್ಷಣಿಕ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿರುತ್ತದೆ. ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಸರ್ಕಾರದ ವತಿಯಿಂದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದ ಯೋಜನೆ ಜಾರಿಯಲ್ಲಿದ್ದು ಸದರಿ ಯೋಜನೆಯಡಿ ಮಕ್ಕಳಿಗೆ ಬಿಸಿ ಹಾಗೂ ಶುಚಿಯಾದ ಊಟವನ್ನು ತಯಾರಿಸಿ ಸಮರ್ಪಕವಾಗಿ ನೀಡುವುದು ಶಾಲೆಯ ಮುಖ್ಯಸ್ಥರ ಜವಾಬ್ದಾರಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಮುಖ್ಯಸ್ಥರು ಮುಖ್ಯೋಪಾಧ್ಯಾಯರು, ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಯಾವುದೇ ಧಾರ್ಮಿಕ ಆಚರಣೆ, ಜಾತ್ರೆ, ಉತ್ಸವ, ಹಬ್ಬ, ಸಮುದಾಯ ಕಾರ್ಯಕ್ರಮ ಅಥವಾ ಇತರೆ ಸಾರ್ವಜನಿಕ ಖಾಸಗಿ ಕಾರ್ಯಕ್ರಮಗಳಿಗೆ ಊಟ ಅಥವಾ ಇತರೆ ಉದ್ದೇಶಕ್ಕಾಗಿ ಶಾಲೆಯ ವತಿಯಿಂದ ಕರೆದೊಯ್ಯುವುದನ್ನು ಅಥವಾ ಕಳುಹಿಸುವುದನ್ನು ಕಡ್ಡಾಯವಾಗಿ ನಿರ್ಬಂಧಿಸಿ ಆದೇಶಿಸಲಾಗಿದೆ.
ಯಾವುದೇ ವಿಶೇಷ ಸರ್ಕಾರಿ, ಶೈಕ್ಷಣಿಕ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳನ್ನು ಶಾಲಾ ಆವರಣದ ಹೊರಗೆ ಕರೆದೊಯ್ಯಬೇಕಾದ ಅನಿವಾರ್ಯತೆ ಇದ್ದಲ್ಲಿ, ಸಂಬಂಧಪಟ್ಟ ಇಲಾಖೆಯ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಅಲ್ಲದೇ ವಿದ್ಯಾರ್ಥಿಗಳ ಸುರಕ್ಷತಾ ಕ್ರಮಗಳು ಹಾಗೂ ಅನ್ವಯಿಸುವ ಸರ್ಕಾರಿ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಆದೇಶದ ಪಾಲನೆಯಲ್ಲಿ ಯಾವುದೇ ಉಲ್ಲಂಘನೆ, ಲೋಪ ದೋಷ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಶಾಲೆಯ ಮುಖ್ಯಸ್ಥರನ್ನು ನೇರ ಹೊಣೆಗಾರರನ್ನಾಗಿ ಮಾಡಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ಸುತ್ತೋಲೆ ಹೊರಡಿಸಿದ್ದಾರೆ.
Related