ಮೊಬಲೈಸೇಶನ್ ಫಾರ್ ಏಡ್ಸ್ ಸುರಕ್ಷಾ ಅಭಿಯಾನದ ವ್ಯಾಪಕ ಜಾಗೃತಿಗೆ ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ

ಚಾಮರಾಜನಗರ: ಎಚ್.ಐ.ವಿ ಏಡ್ಸ್ ತಡೆಗಾಗಿ ಮೊಬಲೈಸೇಶನ್ ಫಾರ್ ಏಡ್ಸ್ ಸುರಕ್ಷಾ ಅಭಿಯಾನ ಕುರಿತು ಜಿಲ್ಲೆಯಾದ್ಯಂತ ವ್ಯಾಪಕ ಜಾಗೃತಿ ಮೂಡಿಸಿ ಯುವಜನರು ಸ್ವಯಂ ಪರೀಕ್ಷೆಗೆ ಒಳಪಡಲು ಪ್ರೇರೇಪಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಮಟ್ಟದ ಎಚ್.ಐ.ವಿ ಏಡ್ಸ್ ನಿಯಂತ್ರಣ ಕಾರ್ಯಕ್ರಮದಡಿ ಮೊಬಲೈಸೇಶನ್ ಫಾರ್ ಏಡ್ಸ್ ಸುರಕ್ಷಾ ಅಭಿಯಾನ ಹಾಗೂ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ಕ್ಷಯಮುಕ್ತ ಭಾರತ ಅಭಿಯಾನ ಕುರಿತು ನಡೆದ ಅಂತರ ಇಲಾಖಾ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಚ್.ಐ.ವಿ ಏಡ್ಸ್ ನಿರ್ಮೂಲನೆಗಾಗಿ ಯುವಜನತೆಗೆ ಮೊಬಲೈಸೇಶನ್ ಫಾರ್ ಏಡ್ಸ್ ಸುರಕ್ಷಾ ಅಭಿಯಾನ ಕಾರ್ಯಕ್ರಮದಡಿ ಸರ್ಕಾರವು ಕ್ಯೂಆರ್ ಕೋಡ್ ಸಿದ್ದಪಡಿಸಿ ಈಗಾಗಲೇ ಬಿಡುಗಡೆ ಮಾಡಿದೆ. ಯುವಜನರು ಸೇರಿದಂತೆ ಹೆಚ್ಚಿನ ಜನರು ಅಭಿಯಾನದ ಕ್ಯೂಆರ್ ಕೋಡ್ ಡೌನ್‍ಲೋಡ್ ಮಾಡಿಕೊಳ್ಳುವ ಮೂಲಕ ಎಚ್.ಐ.ವಿ ಪರೀಕ್ಷೆಯನ್ನು ಎಲ್ಲಿ, ಹೇಗೆ ಮಾಡಿಸಬಹುದೆಂಬ ಮಾಹಿತಿ ಪಡೆಯಬಹುದು ಹಾಗೂ ಅಗತ್ಯವಿದ್ದರೆ ಆಪ್ತಸಮಾಲೋಚನೆ ನಡೆಸಬಹುದಾಗಿದೆ. ಈ ಬಗ್ಗೆ ಎಲ್ಲಾ ಶಾಲಾ ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಅಭಿಯಾನದ ಪೋಸ್ಟರ್‍ಗಳನ್ನು ಪ್ರದರ್ಶಿಸಿ ಹೆಚ್ಚಿನ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಎಚ್.ಐ.ವಿ ಏಡ್ಸ್ ಅನ್ನು ಪ್ರಾಥಮಿಕ ಹಂತದಲ್ಲಿ ಪತ್ತೆಹಚ್ಚಲು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಐಸಿಟಿಸಿ ಕೇಂದ್ರಗಳಲ್ಲಿ ಸೋಂಕು ದೃಢಪಟ್ಟಲ್ಲಿ ನಗರದ ಸಿಮ್ಸ್ ಹಾಗೂ ಕೊಳ್ಳೇಗಾಲದ ಉಪವಿಭಾಗ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಎಚ್.ಐ.ವಿ ಸೋಂಕು ತಡೆಯಲು ಚಾಲ್ತಿಯಲ್ಲಿರುವ ಎ.ಆರ್.ಟಿ ಚಿಕಿತ್ಸೆ ಪಡೆದುಕೊಂಡರೆ ಸಮಾಜದಲ್ಲಿ ಎಲ್ಲರಂತೆ ಆರೋಗ್ಯಕರ ಜೀವನ ನಡೆಸಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸೋಂಕಿನ ಅಪಾಯದಲ್ಲಿರುವ ಜನರನ್ನು ಗುರುತಿಸಿ ಮಾನಸಿಕ ಆತ್ಮಸ್ಥೈರ್ಯ ತುಂಬಿ ಪರೀಕ್ಷೆಗೆ ಒಳಪಡಿಸಬೇಕು. ಅಲ್ಲದೇ ಐ.ಇ.ಸಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.

ಎಚ್.ಐ.ವಿ ಏಡ್ಸ್ ತಡೆಗೆ ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಹಂತದಲ್ಲಿ ಅರಿವು ಮೂಡಿಸಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕೇಂದ್ರೀಕರಿಸಬೇಕು. ಇದಕ್ಕಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಬೇಕು. ಗಣಿಗಾರಿಕೆ, ಕಲ್ಲುಕ್ವಾರಿ, ಕೈಗಾರಿಕೆಗಳ ಕಾರ್ಮಿಕರು ಹಾಗೂ ಆದಿವಾಸಿಗಳಿಗೆ ಎಚ್.ಐ.ವಿ ಸ್ಕ್ರೀನಿಂಗ್ ಮಾಡಬೇಕು. ಜಿಲ್ಲೆಯು ಎರಡು ಅಂತರರಾಜ್ಯ ಗಡಿ ಹೊಂದಿರುವುದರಿಂದ ಅಲ್ಲಿಂದ ಬರುವ ಟ್ರಕ್ ಡ್ರೈವರ್‍ಗಳನ್ನು ಸ್ಥಳೀಯ ಗ್ರಾಮ ಪಂಚಾಯತ್, ಪೊಲೀಸ್, ಸ್ವಯಂಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಸ್ಕ್ರೀನಿಂಗ್ ಮಾಡಲು ಅಧಿಕಾರಿಗಳು ಮುಂದಾಗಬೇಕು. ಅಂತರ ಇಲಾಖೆಗಳು ಈ ಕಾರ್ಯಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.

ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ಕ್ಷಯಮುಕ್ತ ಭಾರತ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡಬೇಕು. ವಿಶ್ವದ ಶೇ. 25ರಷ್ಟು ಕ್ಷಯರೋಗಿಗಳು ಭಾರತದಲ್ಲಿಯೇ ಇರುವುದು ಆಂತಕಕಾರಿ ಬೆಳವಣಿಗೆಯಾಗಿದೆ. ಜಿಲ್ಲೆಯಲ್ಲಿ ವಾರ್ಷಿಕವಾಗಿ 1200 ಕ್ಷಯ ಪ್ರಕರಣಗಳು ಪತ್ತೆಯಾಗುತ್ತಿವೆ. ಗುಂಡ್ಲುಪೇಟೆ ತಾಲೂಕಿನಲ್ಲಿ ಕಡಿಮೆ ಹಾಗೂ ಹನೂರು ತಾಲೂಕಿನಲ್ಲಿ ಹೆಚ್ಚಿನ ಕ್ಷಯ ಪ್ರಕರಣಗಳು ಪತ್ತೆಯಾಗಿದ್ದು, ರೋಗ ಪತ್ತೆಗೆ ಪರೀಕ್ಷೆ ಹಾಗೂ ಅವಶ್ಯ ಚಿಕಿತ್ಸೆಗಾಗಿ ಹೆಚ್ಚು ಒತ್ತು ನೀಡುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಮಾತನಾಡಿ ಕ್ಷಯ ರೋಗದ ನಿರ್ಮೂಲನೆ ಕಾರ್ಯಕ್ರಮದಡಿ ಜಿಲ್ಲೆಯಾದ್ಯಂತ ವ್ಯಾಪಕ ಜಾಗೃತಿ ಮೂಡಿಸಿ 2025ರ ಸಾಲಿನಲ್ಲಿ ಜಿಲ್ಲೆಯ 55 ಗ್ರಾಮ ಪಂಚಾಯಿತಿಗಳನ್ನು ಕ್ಷಯಮುಕ್ತ ಗ್ರಾಮ ಪಂಚಾಯತ್‍ಗಳೆಂದು ಘೋಷಿಸಲಾಗಿತ್ತು. ಅವುಗಳ ಮಾದರಿ ವಿಧಾನಗಳನ್ನು ಪರಾಮರ್ಶಿಸಿ ಈ ಬಾರಿಯು ಹೆಚ್ಚಿನ ಗ್ರಾಮ ಪಂಚಾಯಿತಿಗಳನ್ನು ಕ್ಷಯಮುಕ್ತಗೊಳಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಇದೇ ವೇಳೆ ಮೊಬಲೈಸೇಶನ್ ಫಾರ್ ಏಡ್ಸ್ ಸುರಕ್ಷಾ ಅಭಿಯಾನದ ಕ್ಯೂಆರ್ ಕೋಡ್ ಬಗ್ಗೆ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಸ್‍ನ್ ಸೊಸೈಟಿಯ ಪೋಸ್ಟರ್‍ಗಳನ್ನು ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್‍ಕುಮಾರ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ರವಿಕುಮಾರ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಚಂದ್ರಶೇಖರ್, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ರೇಣುಕಾದೇವಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಂದ್ರಪಾಟೀಲ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪುಟ್ಟಗೌರಮ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಸುಭದ್ರಾದೇವಿ, ಸಮತಾ ಸೊಸೈಟಿಯ ಅಧ್ಯಕ್ಷರಾದ ದೀಪಾಬುದ್ದೆ, ಚೈತನ್ಯ ನೆಟ್‍ವರ್ಕ್ ಸಂಸ್ಥೆಯ ಭಾಗ್ಯಮ್ಮ, ಸ್ನೇಹಜ್ಯೋತಿ ಸಂಸ್ಥೆಯ ಚಂದ್ರಶೇಖರ್ ಪಾಟೀಲ್, ಕೂರ್ಸ್ ಸಂಸ್ಥೆಯ ಸುರೇಶ್, ಜಿಲ್ಲಾಮಟ್ಟದ ಅಧಿಕಾರಿಗಳು, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *