ಚಾಮರಾಜನಗರ: ಕ್ರೀಡಾಕೂಟದಲ್ಲಿ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ ಕ್ರೀಡಾ ಮನೋಭಾವ ಮೆರೆಯುವಂತೆ ಗ್ಯಾರಂ ಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷರಾದ ಸೋಮೇಶ್ವರ ಅವರು ಸಲಹೆ ಮಾಡಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಚಾಮರಾಜನಗರ ತಾಲೂಕುಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಲ್ಕು ಹಂತಗಳಲ್ಲಿ ದಸರಾ ಕ್ರೀಡಾಕೂಟಗಳು ನಡೆಯಲಿದ್ದು, ಪ್ರತಿಬಾರಿಯಂತೆ ಈ ಬಾರಿಯು ಸಹ ತಾಲೂಕುಮಟ್ಟದ ದಸರಾ ಕ್ರೀಡಾಕೂಟಗಳನ್ನು ಈಗಾಗಲೇ ಎಲ್ಲಾ ತಾಲೂಕುಗಳಲ್ಲಿ ಆಯೋಜಿಸಲಾಗಿದೆ. ಚಾಮರಾಜನಗರ ತಾಲೂಕುಮಟ್ಟದ ದಸರಾ ಕ್ರೀಡಾಕೂಟಕ್ಕೆ ಇಂದು ಚಾಲನೆ ನೀಡಲಾಗಿದೆ. ತಾಲೂಕುಮಟ್ಟ, ಜಿಲ್ಲಾಮಟ್ಟ, ವಿಭಾಗಮಟ್ಟ ಹಾಗೂ ರಾಜ್ಯಮಟ್ಟದ ದಸರಾ ಕ್ರೀಡಾಕೂಟಗಳು ನಡೆಯಲಿದೆ. ಜಿಲ್ಲೆಯ ಕ್ರೀಡಾಪಟುಗಳು ಬಹಳ ಉತ್ಸಾಹದಿಂದ ಪಾಲ್ಗೊಂಡು ತಮ್ಮಲ್ಲಿರುವ ಕ್ರೀಡಾಪ್ರತಿಭೆಯನ್ನು ಹೊರತರಬೇಕು ಎಂದರು.
ಕ್ರೀಡೆಯಲ್ಲಿ ಸೋಲು, ಗೆಲುವು ಸರ್ವೆಸಾಮಾನ್ಯವಾಗಿದ್ದು, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೇಹ ಹಾಗೂ ಮನಸ್ಸು ಉಲ್ಲಾಸದಿಂದ ಕೂಡಿರಲಿದೆ. ವಿದ್ಯಾರ್ಥಿಗಳು ತಮ್ಮ ದಿನನಿತ್ಯದ ಪಾಠ, ಪ್ರವಚನದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುಬೇಕು. ಇಂದಿನ ಸೋಲು ನಾಳಿನ ಗೆಲುವಿನ ಮೆಟ್ಟಿಲಾಗಲಿದೆ. ಮುಖ್ಯವಾಗಿ ಕ್ರೀಡಾಮನೋಭಾವ ಮೆರೆಯುವ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಸೋಮೇಶ್ವರ ಎಂದು ತಿಳಿಸಿದರು.
ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿ ಸಮಿತಿ ಸದಸ್ಯರಾದ ಹಿರಿಯ ಕ್ರೀಡಾಪಟು ಶ್ರೀನಿವಾಸ ಪ್ರಸಾದ್ ಅವರು ಮಾತನಾಡಿ ಜಿಲ್ಲೆಯಲ್ಲಿ ಸಾಕಷ್ಟು ಕ್ರೀಡಾಪಟುಗಳಿದ್ದಾರೆ. ಕ್ರೀಡೆಯ ಅಭಿವೃದ್ಧಿಗಾಗಿ ರಾಜ್ಯಸರ್ಕಾರವು ಕೋಟ್ಯಾಂತರ ರೂ. ವೆಚ್ಚಮಾಡಿ ಅಥ್ಲೆಟಿಕ್ ಟ್ರ್ಯಾಕ್, ಈಜುಕೊಳ ಸೇರಿದಂತೆ ವಿವಿಧ ಕಾಮಗಾರಿಗಳ ಪ್ರಗತಿಗಾಗಿ ಅನುದಾನ ನೀಡಿದೆ. ಕ್ರೀಡಾಪಟುಗಳು ಇದರ ಸದ್ಭಳಕೆ ಪಡೆಯಬೇಕು. ಕ್ರೀಡೆಯಲ್ಲಿ ಯಶಸ್ವಿಯಾಗಲು ಸತತ ಪರಿಶ್ರಮ, ಅಭ್ಯಾಸ ಮಾಡಬೇಕು. ಹಾಗಾದಲ್ಲಿ ಮಾತ್ರ ಗುರಿ ಸಾಧಿಸಲು ಕ್ರೀಡೆ ನೆರವಾಗಲಿದೆ ಎಂದು ತಿಳಿಸಿದರು.
ನಗರಸಭೆ ಪೌರಾಯುಕ್ತರಾದ ಪರಶುರಾಮ್ ಛಲವಾದಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ಆರ್. ಗಿರೀಶ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾದ ಚಿಕ್ಕಬಸವಯ್ಯ, ಕ್ರೀಡಾ ತರಬೇತುದಾರರಾದ ಗಣೇಶ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕ್ರೀಡಾಕೂಟದ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಅಥ್ಲೆಟಿಕ್ಸ್, ಉದ್ದ ಹಾಗೂ ಎತ್ತರ ಜಿಗಿತ, ಟ್ರಿಪ್ಪಲ್ ಜಂಪ್, ಗುಂಡು ಎಸೆತ, ಜಾವಲಿನ್ ಎಸೆತ, ಡಿಸ್ಕಸ್ ಎಸೆತ, ವಾಲಿಬಾಲ್, ಕಬ್ಬಡ್ಡಿ, ಖೋ ಖೋ, ಫುಟ್ ಬಾಲ್, ಥ್ರೋಬಾಲ್, ಯೋಗಾಸನ (ವೀರಭದ್ರಾಸನ, ಜಾನು ಶಿರ್ಶಾಸನ, ಹಲಾಸನ ಹಾಗೂ ಧನುರಾಸನ), ಹಾಕಿ, ಬ್ಯಾಸ್ಕೆಟ್‍ಬಾಲ್, ಹ್ಯಾಂಡ್‍ಬಾಲ್, ಕುಸ್ತಿ ಹಾಗೂ ಷಟಲ್ ಬ್ಯಾಡ್ಮಿಂಟನ್, ಬಾಲ್ ಬ್ಯಾಡ್ಮಿಂಟನ್, ಟೇಬಲ್‍ಟೆನ್ನಿಸ್ ಸ್ಪರ್ಧೆಗಳು ನಡೆದವು. ಕ್ರೀಡಾಕೂಟದಲ್ಲಿ 600ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.