‘ಕೌಸ್ತುಭ’ ಪ್ರಮೋದ್ ಶೆಟ್ಟಿ ಫಸ್ಟ್ ಲುಕ್ ರಿಲೀಸ್

ಡಾ.ಪ್ರಭು ಗಂಜಿಹಾಳ

ಬೆಂಗಳೂರು : ನಟ ಪ್ರಮೋದ್ ಶೆಟ್ಟಿ ಜನ್ಮದಿನದ ಸಂದರ್ಭದಲ್ಲಿ ‘ಕೌಸ್ತುಭ’ ಚಿತ್ರತಂಡ ಶೆಟ್ಟರ ಹೊಸ ಪೊಲೀಸ್ ಲುಕ್ ರಿಲೀಸ್ ಮಾಡುವ ಮೂಲಕ ಚಿತ್ರ ತಂಡ ಶುಭ ಕೋರಿದೆ.

ಕೌಸ್ತುಭ ಚಿತ್ರದ ಪಾತ್ರದ ಮೂಲಕ ಪ್ರಮೋದ್ ಶೆಟ್ಟಿಯವರು ಕನ್ನಡದ ಜನಪ್ರಿಯ ನಾಯಕ ನಟರ ಪಟ್ಟಿ ಸೇರುವುದು ಖಚಿತ. ಇಂಥದೊಂದು ಭರವಸೆಯನ್ನು ಖುದ್ದು ಚಿತ್ರದ ನಿರ್ದೇಶಕ ಸಿದ್ದು ವಜ್ರಪ್ಪ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸಾಕಷ್ಟು ಪೋಷಕ, ಖಳ ಹಾಗೂ ಪ್ರಧಾನ ಪಾತ್ರಗಳಲ್ಲಿ ನಟಿಸಿರುವ ಪ್ರಮೋದ್ ಶೆಟ್ಟಿಯವರ ‘ಕೌಸ್ತುಭ’ದ ಲುಕ್ ಹೊಸ ಕಥೆಯನ್ನೇ ಹೇಳುತ್ತಿದೆ.

ಇದೊಂದು ಪತ್ತೆದಾರಿ ಕಥೆಯಾದ ಕಾರಣ ಯಾವುದೇ ಅಂಶಗಳನ್ನು ಬಿಟ್ಟು ಕೊಡುವುದು ಕಷ್ಟ. ಆದರೆ ಪೊಲೀಸ್ ಪಾತ್ರವಾಗಲೀ, ಚಿತ್ರದ ಕ್ಲೈಮ್ಯಾಕ್ಸ್
ಆಗಲೀ ವಿಭಿನ್ನವಾಗಿದೆ ಎಂದು ನಾಯಕ ಪ್ರಮೋದ್ ಶೆಟ್ಟಿ ಅಭಿಪ್ರಾಯ. ಇದುವರೆಗೆ ತಮ್ಮ ಪಾತ್ರಗಳಲ್ಲಿ ಹಾಸ್ಯವನ್ನು ಕೂಡ ಪ್ರದರ್ಶಿಸುತ್ತಿದ್ದ
ಪ್ರಮೋದ್ ಇಲ್ಲಿ ‘ಚಾಣಕ್ಯ’ ಎನ್ನುವ ಪೊಲೀಸ್ ಅಧಿಕಾರಿಯಾಗಿದ್ದಾರೆ. ನಾಲ್ಕು ಫೈಟ್‌ಗಳಿವೆ. ಇದು ಪ್ರಮೋದ್ ಶೆಟ್ಟಿಯವರು ನಾಯಕರಾಗಿರುವ ಮೊದಲ
ಕಮರ್ಷಿಯಲ್ ಚಿತ್ರ ಕೂಡ ಹೌದು. ನಿರ್ದೇಶಕ ಸಿದ್ದು ವಜ್ರಪ್ಪ ಅವರಿಗೆ ಇದು ಎರಡನೇ ಸಿನಿಮಾ. ಕಳೆದ ವರ್ಷ ‘ರಾವುತ’ ಎನ್ನುವ ಪ್ರಯೋಗಾತ್ಮಕ ಚಿತ್ರ ನಿರ್ದೇಶಿಸಿ ಗಮನ ಸೆಳೆದವರು. ಈಗಾಗಲೇ 60 ಭಾಗದಷ್ಟು ಚಿತ್ರೀಕರಣ ಮುಗಿದಿದೆ. ಮೂರು ಹಾಡುಗಳಿದ್ದು, ಒಂದು ಹಾಡನ್ನು ನಿರ್ದೇಶಕರೇ ರಚಿಸಿದ್ದಾರೆ. ಇನ್ನೊಂದು ಗೀತೆ ಪ್ರಶಾಂತ್ ಬಾಗೂರು ಅವರದಿದೆ. ಚಿತ್ರದಲ್ಲಿ ನಾಯಕನ ಎಂಟ್ರಿಗೆ ವಿಶೇಷ ಹಾಡು ಮಾಡಲಾಗಿದೆ. ಒಂದು ಹಾಡನ್ನು ರಿಯಲ್ ಸ್ಟಾರ್ ಉಪೇಂದ್ರ ಹಾಡಲಿದ್ದಾರೆ ಎನ್ನಲಾಗಿದೆ. ಡಾಸ್ ಮೊಡ್ ಸಂಗೀತ ನಿರ್ದೇಶನವಿದೆ.

ತಾರಾಗಣದಲ್ಲಿ ಹಿರಿಯನಟ, ನಿರ್ದೇಶಕ ಟಿ.ಎಸ್. ನಾಗಾಭರಣ ಸೇರಿದಂತೆ ರವಿಶಂಕರ್ ಗೌಡ, ಕಿರುತೆರೆ ನಟಿ ವಿದ್ಯಾ, ಕಡ್ಡಿಪುಡಿ ಚಂದ್ರು ಜೊತೆಗೆ ದೊಡ್ಡ
ತಾರಾಗಣವಿದೆ. ‘’ರಾಮಾ ರಾಮಾ ರೇ’ ಖ್ಯಾತಿಯ ನಟರಾಜ್ ವಿಶೇಷ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ. ಅರವಿಂದ್ ರಾಜ್ ಸಂಕಲನ, ದಿಲೀಪ್ ಎಂ.ರಾಜ್ ಸಾಹಸ, ಪಿಆರ್ ಓ ರಮಿತ್ ಏಲಕ್ಕಿ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಇದ್ದಾರೆ. ಎವಿಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ರಾಜೇಶ್ ಧನಪಾಲ್ ಬಂಡವಾಳ ಹೂಡಿದ್ದಾರೆ.

Leave a Reply

Your email address will not be published. Required fields are marked *