ಚಾಮರಾಜನಗರ: ನೀಟ್ ಪರೀಕ್ಷಾ ಅಕ್ರಮ ಹಾಗೂ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳ, ವಿದ್ಯಾರ್ಥಿಗಳ ಮೇಲೆ ಹಲ್ಲೆಯ ನೈತಿಕ ಹೊಣೆಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿ.ಜಿ.ಸಾಗರ್ ಬಣದ ಜಿಲ್ಲಾ ಸಮಿತಿ ವತಿಯಿಂದ ನಗರದ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿ.ಜಿ.ಸಾಗರ್ ಬಣದ ಜಿಲ್ಲಾ ಸಮಿತಿಯ ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ ಅವರ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಕೇಂದ್ರ ಸರ್ಕಾರ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿ.ಜಿ.ಸಾಗರ್ ಬಣದ ಜಿಲ್ಲಾ ಸಮಿತಿಯ ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ ಮಾತನಾಡಿ, ನೀಟ್ ಪರೀಕ್ಷಾ ಅಕ್ರಮ ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ
ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ಪರ್ಸ ಪರಿಸರ ಹಾಗೂ ಶಿಕ್ಷಣ ತಜ್ಞ ಸೊನಮ್ ವಾಂಗ್ಚೂಕ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸದಿರುವುದು ಖಂಡನೀಯ.
ಕೇಂದ್ರ ಸರ್ಕಾರಕ್ಕೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇದ್ದರೆ ಸೊನಮ್ ವಾಂಗ್ಚೂಕ್ ಅವರ ಜೀವ ರಕ್ಷಣೆಗೆ ಮಧ್ಯೆ ಪ್ರವೇಶಿಸಬೇಕು. ಪ್ರತಿಭಟನಾನಿರತ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುವ ಸಂಬಂಧ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದರು.
ನೀಟ್ ಪರೀಕ್ಷಾ ಪತ್ರಿಕೆ ಸೋರಿಕೆಯಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ವಿದ್ಯಾರ್ಥಿಗಳ ಹಲವು ವರ್ಷಗಳ ಶ್ರಮ ಮಣ್ಣು ಪಾಲಾಗಿದೆ. ಮನನೊಂದು ಹಲವು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ, ಆಡಳಿತಾತ್ಮಕ ವೈಫಲ್ಯಗಳಿಗೆ ಹೊಣೆಗಾರಿಕೆಯೇ ಇಲ್ಲದಂತಾಗಿದೆ. ಕೇಂದ್ರ ಸರ್ಕಾರ ಲಕ್ಷಾಂತರ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟ ಆಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರ ಹಲ್ಲೆ ಮಾಡಿರುವುದು ತೀವ್ರ
ಖಂಡನೀಯ. ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ನೀಟ್ ವಿದ್ಯಾರ್ಥಿಗಳ ಹೋರಾಟ ಬೆಂಬಲಿಸಿ ರಾಜ್ಯಾದ್ಯಂತ ನಮ್ಮ ಸಂಘಟನೆ ಪ್ರತಿಭಟನೆ ನಡೆಸುತ್ತಿದ್ದು, ಜಿಲ್ಲೆಯಲ್ಲೂ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.
ಪರೀಕ್ಷಾ ಅಕ್ರಮಗಳ ಬಗ್ಗೆ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು, ವಿದ್ಯಾರ್ಥಿಗಳ ಭವಿಷ್ಯ ಹಾಗೂ ಪರೀಕ್ಷಾ ಅಕ್ರಮಗಳ ಹೊಣೆಗಾರಿಕೆ ಒತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು. ಅಮಾಯಕ ವಿದ್ಯಾರ್ಥಿಗಳ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು, ಮೃತ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ಘೋಷಿಸಬೇಕು. ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ಪರೀಕ್ಷೆಗಳನ್ನು ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನಾ ಸಂಚಾಲಕ ರಂಗಸ್ವಾಮಿ, ಖಜಾಂಚಿ ರವಿಕುಮಾರ್ ಗುಂಟಾಪುರ, ಯಳಂದೂರು ತಾಲೂಕು ಸಂಚಾಲಕ ಮಲ್ಲಿಕಾರ್ಜುನ,
ಆಟೋ ಉಮೇಶ್, ಚನ್ನಬಸಮ್ಮ, ಪುಟ್ಟಬಸಮ್ಮ, ಲಕ್ಷ್ಮ್ಮಮ್ಮ, ನಂಜಮ್ಮ, ಚಿನ್ನಸ್ವಾಮಿ, ಶೇಖರ್, ಸಿದ್ದಪ್ಪ ಇತರರು ಭಾಗವಹಿಸಿದ್ದರು.