ಸಕ್ರಿಯ ಸಂಘಟನೆಗಳಿಂದ ಸಮಾಜದ ಬದಲಾವಣೆ ಸಾಧ್ಯ : ಆರ್.ಪಿ.ನಂಜುಂಡಸ್ವಾಮಿ

  • ಜಯ ಕರ್ನಾಟಕ ಜನಪರ ವೇದಿಕೆಯ ತಾಲೂಕು ಪದಾಧಿಕಾರಿಗಳ ನೇಮಕ

ಚಾಮರಾಜನಗರ: ಯುವಕರು ಸಕ್ರಿಯ ಯವಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗುತ್ತದೆ ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ  ಆರ್.ಪಿ.ನಂಜುಂಡಸ್ವಾಮಿ ಹೇಳಿದರು.
   ನಗರದ ಪ್ರವಾಸಿ ಮಂದಿರದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ  ಮಾತನಾಡಿದರು.
ಪ್ರಸ್ತುತ ಸಂದರ್ಭದಲ್ಲಿ ನಮ್ಮನ್ನು ಆಳುವ ಸರ್ಕಾರಗಳು ಮತದಾರರನ್ನು ಅವ್ಯವಸ್ಥೆಯ ಕಡೆಗೆ ಕೊಂಡೊಯ್ಯುತ್ತಿದೆ. ಹಿರಿಯ ರಾಜಕಾರಣಿಗಳು ಯುವಜನಾಂಗವನ್ನು ರಾಜಕಾರಣಕ್ಕೆ ತರುವ ಕೆಲಸವನ್ನು ಮಾಡುತ್ತಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯದೇ ಇರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ರಾಜಕಾರಣಗಳನ್ನು ಎಚ್ಚರಿಸುವ ನಿಟ್ಟಿನಲ್ಲಿ ಸಂಘಟನೆಗಳ ಜವಾಬ್ದಾರಿ ಹೆಚ್ಚಾಗಿದೆ ಎಂದು ತಿಳಿಸಿದರು.
ರಾಜಕಾರಣ ಮತ್ತು ಸಂಘಟನಾತ್ಮಕವಾಗಿ ಸಾಕಷ್ಟು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ನನ್ನನ್ನು ಮತ್ತೆ ಸಂಘಟನೆ ಕಡೆ ಮುಖ ಮಾಡುವಂತೆ ಮಾಡಿದೆ. ಸಂಘಟನೆಯ ಕೆಲಸ ವಿಭಿನ್ನವಾಗಿ ಇರಬೇಕು ಎಂಬ ದೃಷ್ಟಿಯೊಂದಿಗೆ ಜಯ ಕರ್ನಾಟಕ ಜನಪರ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಗುಣರಂಜನ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಸಂಘನೆಯನ್ನು ಬಲಪಡಿಸಬೇಕಿದೆ ಎಂದರು.
ಸಾಂಕೇತಿಕವಾಗಿ ಗುಂಡ್ಲುಪೇಟೆ ಮತ್ತು ಚಾಮರಾಜನಗರ ತಾಲೂಕು ಸಮಿತಿಯನ್ನು ಆಯ್ಕೆ ಮಾಡಲಾಗಿದೆ. ಎರಡು ವರ್ಷಗಳಿಗೆ ಒಮ್ಮೆ ತಾಲೂಕು ಅಧ್ಯಕ್ಷರನ್ನು ಆಯ್ಕೆ ಮಾಡುವಂತಹ ಕೆಲಸ ಮಾಡೋಣ. ಸಕ್ರಿಯವಾಗಿ ಯುವಕರು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
  ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಜಕಾವುಲ್ಲಾ ಮಾತನಾಡಿ, ಕೆಲವು ರಾಜಕೀಯ ಪಕ್ಷಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದೇನೆ. ಆದರೆ ಅವುಗಳಿಂದ ಅನುಕೂಲಗಳಿಗಿಂತಲೂ ಮೋಸ ಹೆಚ್ಚಾಗಿದೆ. ಈ ಕಾರಣಕ್ಕೆ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನಮ್ಮ ಸಂಘಟನೆಯಲ್ಲಿ ರಾಜ್ಯಾದ್ಯಂತ 3-4ಲಕ್ಷ ಕಾರ್ಯಕರ್ತರು ಇದ್ದಾರೆ. ಯುವಕರು ಹೆಚ್ಚಿನ ಸಹಕಾರ ನೀಡಿದರೇ, ಸಂಘಟನೆ ಬಲಪಡಿಸಲು ನೆರವಾಗಲಿದೆ ಎಂದರು.
ನಮ್ಮ ಸಂಘಟನೆಯ ಮೂಲಕ ಕರ್ನಾಟಕದ ನೆಲ, ಜಲ ಭಾಷೆ ಹಾಗೂ ಬಡವರ ಪರವಾಗಿ ನಿರಂತರವಾಗಿ ಹೋರಾಟ ಮಾಡುತ್ತೇವೆ. ರಾಜಕಾರಣಿಗಳು ಸೂಕ್ತ ರೀತಿಯಲ್ಲಿ ಕೆಲಸ ಮಾಡಿದ್ದೇ ಆದರೆ ಸಂಘಟನೆಗಳ ಅವಶ್ಯಕತೆ ಇರಲಿಲ್ಲ. ರಾಜಕೀಯ ಪಕ್ಷಗಳಿಗಿಂತಲೂ ಇಂದಿಗೂ ವಿವಿಧ ಸಂಘಟನೆಗಳು ರಾಜ್ಯದ ಉಳಿವಿಗೆ ಶ್ರಮಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್, ಚಂದ್ರಶೇಖರ್, ಮಾಂಬಳ್ಳಿ ರಾಜೇಶ್, ನಾಗಸ್ವಾಮಿ, ಜ್ಯೋತಿಗೌಡನಪುರ ನಾಗರಾಜು, ರೇಖಾ, ಭೀಮನಬೀಡು ನಾಗರಾಜು, ಮೊಹಮ್ಮದ್ ಕಿಜರ್, ದೇವರಾಜ್, ಚಂದ್ರಬಾಬು ಹಾಗೂ ಇತರರು ಹಾಜರಿದ್ದರು.
ನೂತನ ಪದಾಧಿಕಾರಿಗಳ ಆಯ್ಕೆ:
ಜಯ ಕರ್ನಾಟಕ ಜನಪರ ವೇದಿಕೆಯ ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲೂಕು ನೂತನ ಪದಾಧಿಕಾರಿಗಳನ್ನು  ನೇಮಕ ಮಾಡಲಾಯಿತು. ಚಾಮರಾಜನಗರ ತಾಲೂಕು ಅಧ್ಯಕ್ಷರಾಗಿ ರಘು, ಪ್ರಧಾನ ಕಾರ್ಯದರ್ಶಿ ನಂಜುಂಡಸ್ವಾಮಿ, ಕಾರ್ಯಾಧ್ಯಕ್ಷ ಭರತ್, ಕಾರ್ಯದರ್ಶಿಯಾಗಿ ಸಿದ್ದರಾಜು, ಸಹ ಕಾರ್ಯದರ್ಶಿಯಾಗಿ ನಾಗರಾಜು ಅವರನ್ನು ನೇಮಕ ಮಾಡಲಾಯಿತು. ಗುಂಡ್ಲುಪೇಟೆ ತಾಲೂಕು ಅಧ್ಯಕ್ಷರಾಗಿ ನಾಗಸ್ವಾಮಿ, ಕಾರ್ಯಾಧ್ಯಕ್ಷರಾಗಿ ನಾಗಮಲ್ಲು ಅವರನ್ನು ನೇಮಕ ಮಾಡಲಾಯಿತು.

Leave a Reply

Your email address will not be published. Required fields are marked *